ನ್ಯಾಯಾಲಯದ ಸೂಚನೆ ಹೊರತಾಗಿಯೂ ತಮಗೆ ಸೌಲಭ್ಯ ನೀಡದ ಜೈಲಾಧಿಕಾರಿಗಳ ವಿರುದ್ಧ ನಟ ದರ್ಶನ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಜೈಲಿನಲ್ಲಿರುವ ನಟ ದರ್ಶನ್ ಜೈಲಾಧಿಕಾರಿಗಳು ದಿನದಲ್ಲಿ ಎರಡು ಬಾರಿ ವಾಕಿಂಗ್ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಅದನ್ನು ಹೊರತುಪಡಿಸಿ ಯಾವುದೇ ಹಾಸಿಗೆ, ದಿಂಬು ನೀಡದೇ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್‌ನಲ್ಲಿ ಸೋಮವಾರ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇತ್ತೀಚೆಗೆ ನಡೆದ ವಿಚಾರಣೆ ವೇಳೆ ದರ್ಶನ್ ಗೆ ಜೈಲಿನ ಹೊರಗೆ ದಿನಕ್ಕೆ ಎರಡು ಬಾರಿ ವಾಕಿಂಗ್ ಮಾಡಲು ಅವಕಾಶ ನೀಡಬೇಕು. ಜೈಲಿನ ಅಂಗಡಿಯಲ್ಲಿ ತಿಂಡಿ ಖರೀದಿಸಲು ಅವಕಾಶ ನೀಡಬೇಕು ಹಾಗೂ ಹಾಸಿಗೆ ಮತ್ತು ದಿಂಬು ನೀಡಬೇಕು. ಅಗತ್ಯ ಬಿದ್ದರೆ ಹೆಚ್ಚಿನ ಹಾಸಿಗೆ ಮತ್ತು ದಿಂಬು ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು.
ನ್ಯಾಯಾಲದ ಆದೇಶ ಮಾಡಿ ವಾರ ಕಳೆದರೂ ದರ್ಶನ್‌ಗೆ ಯಾವುದೇ ಸೌಕರ್ಯ ನೀಡಿಲ್ಲ. ಹಾಸಿಗೆ, ದಿಂಬು ಒದಗಿ ಎಂದು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಎರಡು-ಮೂರು ಬಾರಿ ಜೈಲಿಗೆ ಹೋಗಿ ವಿಚಾರಿಸಿದರೂ ಯಾವುದೇ ಸೌಲಭ್ಯ ನೀಡಿಲ್ಲ ಎಂದು ಅರ್ಜಿಯಲ್ಲಿ ವಕೀಲರು ಉಲ್ಲೇಖಿಸಿದ್ದಾರೆ.



