ಚಾಮರಾಜನರ: ಮಲೈ ಮಹದೇಶ್ವರ ಬೆಟ್ಟ ಪಾನಮುಕ್ತ ಎಂದು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನು ಮುಂದೆ ಹೊರಗಿನಿಂದ ಮದ್ಯ ತರುವುದಕ್ಕೂ ಹಾಗೂ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಪ್ರಕಟಿಸಿದ್ದಾರೆ.
ಮಲೈಮಹೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಸಿದ ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಮಲೈ ಮಹದೇಶ್ವರ ಲಾಡು ಪ್ರಸಾದಕ್ಕೂ ತಿರುಪತಿ ಮಾದರಿಯಲ್ಲಿ ನಂದಿನಿ ತುಪ್ಪ ಬಳಕೆಗೆ ಸಭೆ ನಿರ್ಣಯ ಕೈಗೊಳ್ಳಲಾಯಿತು.

ಮಲೈ ಮಹದೇಶ್ವರ ಬೆಟ್ಟದ ಪ್ರಸಾದ ಲಾಡುಗೆ, ತಿರುಪತಿ ದೇವಸ್ಥಾನದ ಮಾದರಿಯಲ್ಲಿ ನಂದಿನಿ ತುಪ್ಪ ಬಳಸಿ, ಪ್ರಸಾದದ ಗುಣಮಟ್ಟವನ್ನು ಇನ್ನಷ್ಟು ಉನ್ನತೀಕರಿಸುವುದು. ಮದಿನ ದಿನಗಳಲ್ಲಿ 100 ಗ್ರಾಂ ತೂಕದ ಪ್ರಸಾದ ಲಾಡು 35 ರೂಪಾಯಿಗೆ ವಿತರಿಸುವ ಬಗ್ಗೆ ಸಭೆ ನಿರ್ಣಯಿಸಿತು.
ಪ್ರಾಧಿಕಾರದಲ್ಲಿ ಕೆಲಸ ಮಾಡುವ 66 ಕಾರ್ಮಿಕ ಕುಟುಂಬಗಳಿಗೆ ತಲಾ 20 ಲಕ್ಷ ವೆಚ್ಚದಲ್ಲಿ, ಒಟ್ಟು 12-13 ಕೋಟಿ ವೆಚ್ಚದಲ್ಲಿ ಆದಷ್ಟು ಬೇಗ ನೂತನ ಮನೆ ಕಟ್ಟಿ ಕೊಡಲು ಸಭೆ ನಿರ್ಣಯ ಕೈಗೊಳ್ಳಲಾಯಿತು.
ಹಿಂದಿನ ಪ್ರಾಧಿಕಾರದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಒಂದೂವರೆ ವರ್ಷದಿಂದ ಜಾರಿ ಆಗದೇ ಇರುವುದಕ್ಕೆ ಪ್ರಾಧಿಕಾರದ ಕಾರ್ಯದರ್ಶಿಗಳನ್ನು ತರಾಟೆಗೆ ತೆಗೆದುಕೊಂಡ ಸಿಎಂ, ಪ್ರಾಧಿಕಾರದ ಕೆಲಸ ಕಾರ್ಯಗಳು, ಕಾಮಗಾರಿಗಳು ಸೂಕ್ತವಾಗಿ, ವೇಗವಾಗಿ ನಡೆಯಲು ಒಬ್ಬ ಅಧಿಕಾರಿಯನ್ನು ಪ್ರಾಧಿಕಾರಕ್ಕೆ ನೇಮಿಸಲು ಸೂಚಿಸಿದರು.
ಹಿಂದಿನ ಸಭೆಯ ನಿರ್ಣಯದಂತೆ ಪ್ರವಾಸಿಗರ ಶೆಲ್ಟರ್ ಮತ್ತು ಶೌಚಾಲಯಗಳ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸದೇ ನಿರ್ಲಕ್ಷ್ಯ ವಹಿಸಿದ್ದಕ್ಕೆ ಸಿಎಂ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಪ್ರಾಧಿಕಾರ ಮತ್ತು ಮಹದೇಶ್ವರ ಬೆಟ್ಟಕ್ಕೆ ಸೇರಿದ ಜಾಗದಲ್ಲಿ ನೆಲೆಸಿರುವ 13 ಕುಟುಂಬಗಳಿಗೆ ಪರ್ಯಾಯ ಸ್ಥಳ ಒದಗಿಸಿ ಸ್ಥಳಾಂತರಿಸುವ ಮತ್ತು ಉಳಿದಿರುವವರನ್ನು ಹಾಗೇ ಉಳಿಸಿ, ಹೊಸದಾಗಿ ವಾಣಿಜ್ಯ ಉದ್ದೇಶದ ನಿರ್ಮಾಣಗಳಿಗೆ ಅವಕಾಶ ಆಗದಂತೆ ಖಚಿತವಾಗಿ ತಡೆಯುವ ಬಗ್ಗೆ ಚರ್ಚೆ ನಡೆಸಲಾಯಿತು.
ಮಲೈ ಮಹದೇಶ್ವರ ಬೆಟ್ಟದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಆಗುವುದನ್ನು ಸಂಪೂರ್ಣ ತಡೆಯಬೇಕು. ಗಡಿಪಾರು ಮಾಡಿದ್ದರೂ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.



