ತೆಲಂಗಾಣ ಮೂಲದ ಮಹಿಳೆಯೊಬ್ಬರು ಮಂಗಳೂರಿನ ಆಸ್ಪತ್ರೆಯಲ್ಲಿ ಒಂದೇ ಬಾರಿಗೆ 4 ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತೆಲಂಗಾಣ ಮೂಲದ ಬಾನುತ್ ದುರ್ಗಾ 4 ಮಕ್ಕಳಿಗೆ ಜನ್ಮ ನೀಡಿದ್ದಾರೆ.
2 ಹೆಣ್ಣು ಮತ್ತು 2 ಗಂಡು ಮಗು ಸೇರಿ ೪ ಮಕ್ಕಳಿಗೆ ಜನ್ಮ ನೀಡಿದ್ದು, ಮಕ್ಕಳ ತೂಕ 1.2 ಕೆಜಿ, 1.1 ಕೆಜಿ, 900 ಗ್ರಾಂ ಹಾಗೂ 800 ಗ್ರಾಂ ತೂಕ ಹೊಂದಿವೆ ಎಂದು ಆಸ್ಪತ್ರೆಯ ವೈದ್ಯರ ತಂಡ ಪ್ರಕಟಣೆಯಲ್ಲಿ ತಿಳಿಸಿದೆ.
ಈ ರೀತಿಯ ಹೆರಿಗೆ ಸಮಯವು ಕ್ಲಿಷ್ಟಕರ, ಅಪರೂಪದ್ದಾಗಿದೆ. ಜನಿಸಿದ ಮಕ್ಕಳು ಕಡಿಮೆ ತೂಕ ಇರುವುದರಿಂದ ಹೆರಿಗೆ ಅತ್ಯಂತ ಕ್ಲಿಷ್ಟಕರವಾಗಿತ್ತು. ಗರ್ಭಾವಸ್ಥೆಯ ವೇಳೆ ಅಲ್ಟಾ ಸೌಂಡ್ ನಡೆಸುವ ಸಂದರ್ಭದಲ್ಲಿ ಈ ವಿಚಾರ ತಿಳಿದು ದಂಪತಿ ಅಚ್ಚರಿಗೊಂಡಿದ್ದರು ಎಂದು ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಜಾಯ್ಲಿನ್ ಡಿ ಅಲ್ಮೇಡಾ ತಿಳಿಸಿದ್ದಾರೆ.
ಹೆರಿಗೆಗೂ ಮುನ್ನ ಈ ವಿಷಯವನ್ನು ಪತಿ ತೇಜ ಅವರಿಗೂ ತಿಳಿಸಲಾಗಿತ್ತು. ದಂಪತಿ ಆತಂಕಕ್ಕೆ ಒಳಗಾಗಿದ್ದರು. ಅಪಾಯದ ಸಾಧ್ಯತೆ ನಡುವೆ ಕೂಡ ನಾಲ್ಕು ಮಕ್ಕಳನ್ನು ಉಳಿಸಿ ಕೊಳ್ಳುವ ನಿರ್ಧಾರ ಮಾಡಿದ್ದರು.
30 ವಾರಗಳ ಗರ್ಭಾವಸ್ಥೆಯ ಬಳಿಕ ನ. 9 ರಂದು ಬನೊತ್ ದುರ್ಗಾ ಅವರಿಗೆ ಎಲೆಕ್ಟಿವ್ ಸಿಸೇರಿಯನ್ ಮೂಲಕ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಡಾ. ಮುರಳೀಧರ್, ಡಾ. ರಾಮ್ ಬಸ್ತಿ ಮತ್ತು ಡಾ. ಮಹೇಶ್ , ಪ್ರಸೂತಿ ತಂಡದಲ್ಲಿ ಡಾ. ಸುಜಯಾ ರಾವ್, ಡಾ. ವಿಸ್ಮಯ, ಡಾ. ಏಕ್ತಾ, ಡಾ. ದಿಯಾ ಮತ್ತು ಡಾ ನಯನಾ ಅವರು ಇದ್ದರು. ಇವರ ಜತೆಗೆ ಶಿಶು ತಜ್ಞೆ ಡಾ. ಚಂದನ ಪೈ ಅವರ ನೇತೃತ್ವದ ತಂಡ ನೆರವು ನೀಡಿತ್ತು.