ಸೇತುವೆಯಿಂದ ತುಂಗಾ ನದಿಗೆ ಜಿಗಿದು ನರ್ಸ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಎನ್.ಆರ್.ಪುರ ತಾಲೂಕಿನ ಮಡುಬು ಗ್ರಾಮದ ಬಳಿ ಮುತ್ತಿನಕೊಪ್ಪದ ರನ್ಯಾ (34) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶರಣಾದವರು. ರನ್ಯಾ ಶಿವಮೊಗ್ಗದ ಖಾಸಗಿ ಆಸ್ಪತೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ರನ್ಯಾ ಸೇತುವೆ ಮೇಲಿಂದ ನದಿಗೆ ಹಾರಿದ್ದನ್ನು ಗಮನಿಸಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ನದಿಯಿಂದ ಹೊರ ತೆಗೆಯಲಾಗಿದೆ. ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ರನ್ಯಾ ಅವರಿಗೆ ಸುಮಾರು 12 ವರ್ಷಗಳ ಹಿಂದೆ ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪದ ವ್ಯಕ್ತಿಯೊಂದಿಗೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
“ರನ್ಯಾ ಅವರಿಗೆ ಹನ್ನೆರಡು ವರ್ಷಗಳ ಹಿಂದೆ ಮದುವೆಯಾಗಿದ್ದು, ಕೆಲವು ತಿಂಗಳಿನಿಂದ ಪತಿಯಿಂದ ದೂರವಿದ್ದರು. ಕೆಲಕಾಲ ತವರು ಮನೆ ಶಿವಮೊಗ್ಗದಲ್ಲಿ ವಾಸವಾಗಿದ್ದರು. ಇದಾದ ನಂತರ ಮತ್ತೆ ಮುತ್ತಿನಕೊಪ್ಪದಲ್ಲಿರುವ ಪತಿಯ ಮನೆಗೆ ಆಗಮಿಸಿದ್ದರು. ಗಂಡ ಹಾಗೂ ಹೆಂಡತಿ ಮಧ್ಯೆ ಕೆಲ ಸಮಯದಿಂದ ಹೊಂದಾಣಿಕೆ ಇರಲಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ” ಎಂದು ಎನ್.ಆರ್.ಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ ತಿಳಿಸಿದ್ದಾರೆ.
ಕೆಲವು ವಿಚಾರಗಳಿಂದ ರನ್ಯಾ ಮಾನಸಿಕವಾಗಿ ಕುಗ್ಗಿದ್ದರು ಎಂದೂ ತಿಳಿದು ಬಂದಿದೆ. ರನ್ಯಾ ಅವರ ತಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತದೇಹವನ್ನು ಎನ್.ಆರ್.ಪುರ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.


