ಚುನಾವಣಾ ಅಕ್ರಮದ ಆರೋಪಗಳು ಸತತವಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ಮತದಾನದ ದಾಖಲೆಗಳನ್ನು ನಾಶ ಮಾಡಬೇಡಿ ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.
ಇವಿಎಂ ಯಂತ್ರಗಳ ಮೇಲೆ ಅನುಮಾನ ವ್ಯಕ್ತಪಡಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಮತದಾನದಲ್ಲಿ ಬಳಸಲಾದ ಇವಿಎಂಗಳ ದಾಖಲೆ ನಾಶಪಡಿಸದಂತೆ ಸೂಚಿಸಿದೆ.
ಮತ ಎಣಿಕೆ ಮುಗಿದು ಹೋಗಿದ್ದರೂ ಇವಿಎಂ ಯಂತ್ರಗಳಲ್ಲಿರುವ ದಾಖಲೆಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳಬೇಕು ಮತ್ತು ದಾಖಲೆ ನಾಶವಾಗದಂತೆ ನೋಡಿಕೊಳ್ಳಬೇಕು ಅಲ್ಲದೇ ಮರು ಸಂಗ್ರಹಿಸಲಾದ ದಾಖಲೆ ಆಗಿರಬಾರದು ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನೊಳಗೊಂಡ ಪೀಠ ಸೂಚಿಸಿದೆ.
ಸೋತ ಅಭ್ಯರ್ಥಿ ಸ್ಪಷ್ಟನೆ ಕೇಳಿದರೆ ಅದನ್ನು ನೀಡಬೇಕಾದ ಜವಾಬ್ದಾರಿ ಸಂಬಂಧಪಟ್ಟ ಇಂಜಿನಿಯರ್ ದ್ದಾಗಿರಬೇಕು. ಅದು ಕೂಡ ಟೆಂಪರಿಂಗ್ ಅಥವಾ ತಿರುಚಿದ ದಾಖಲೆಗಳು ಆಗಿರಬಾರದು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಇವಿಎಂ ಯಂತ್ರಗಳನ್ನು ಅಭಿವೃದ್ಧಿಪಡಿಸಿದ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ಕಂಪನಿ ಡಮ್ಮಿ ಚಿಹ್ನೆ ಹೊಂದಿದ ಇವಿಎಂಗಳಲ್ಲಿ ಸಂಗ್ರಹಿಸಲಾಗಿದ್ದು, ಮೂಲ ಯಂತ್ರಗಳ ದಾಖಲೆಗಳನ್ನು ತೆಗೆಯಲಾಗಿದೆ ಎಂದು ಹೇಳಲಾಗಿದೆ. ಇವಿಎಂಗಳಲ್ಲಿ ಡಾಟಾ ಯಾಕೆ ತೆಗೆದಿದ್ದು ಎಂದು ಪ್ರಶ್ನಿಸಿರುವ ಮುಖ್ಯ ನ್ಯಾಯಮೂರ್ತಿ ದಾಖಲೆಗಳು ನಾಶವಾಗದಂತೆ ನೋಡಿಕೊಳ್ಳುವಂತೆ ಸ್ಪಷ್ಟ ಸೂಚನೆ ನೀಡಿದೆ.



