ಉದ್ಯಮಿಯೊಬ್ಬರ ಕಚೇರಿಯಲ್ಲಿ ಹಲವಾರು ವರ್ಷಗಳಿಂದ ಚಿನ್ನಾಭರಣ ಹಾಗೂ ನಗದು ದೋಚುತ್ತಿದ್ದ ನೌಕರನನ್ನು ಬೆಂಗಳೂರಿನ ಜಯನಗರ ಪೊಲೀಸರು ಬಂಧಿಸಿದ್ದಾರೆ.
ಜಯನಗರದ 8ನೇ ಬ್ಲಾಕ್‌ನ ಸಂಗಂ ಸರ್ಕಲ್‌ನಲ್ಲಿರುವ ಗ್ರಾನೈಟ್ ಉದ್ಯಮಿಯ ಕಚೇರಿಯಲ್ಲಿ 20 ವರ್ಷಗಳಿಂದಲೂ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ಎಂಬಾತನನ್ನು ಬಂಧಿಸಿರುವ ಪೊಲೀಸರು 89.09 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
ಸಾಲದ ಸುಳಿಯಲ್ಲಿ ಸಿಲುಕಿದ್ದ ಕಾರ್ತಿಕ್ ಸಾಲ ತೀರಿಸಲು ಕಳ್ಳತನ ಮಾಡಲು ಸಂಚು ರೂಪಿಸಿ 8 ವರ್ಷಗಳ ಹಿಂದೆಯೇ ಕಚೇರಿಯ ಕಬೋರ್ಡ್ ನಕಲಿ ಕೀಯನ್ನು ಸಿದ್ಧಪಡಿಸಿಟ್ಟುಕೊಂಡಿದ್ದ. ಆ ಕೀ ಬಳಸಿ ಮಾಲೀಕರು ಇಲ್ಲದ ವೇಳೆ ಸ್ವಲ್ಪ ಸ್ವಲ್ಪವೇ ಚಿನ್ನಾಭರಣ, ಬೆಳ್ಳಿ, ನಗದನ್ನು ದೋಚುತ್ತಿದ್ದ.
ಮಾಲೀಕರಿಗೆ ಇತ್ತೀಚೆಗೆ ಅನುಮಾನ ಬಂದು ಪ್ರಶ್ನಿಸಿದಾಗ ಯಾರೋ ಕಳ್ಳತನ ಮಾಡಿರಬಹುದು ಎಂದು ಹಾರಿಕೆಯ ಉತ್ತರ ನೀಡುತ್ತಿದ್ದ. ವ್ಯವಸ್ಥಾಪಕ ಕಾರ್ತಿಕ್ ಬಗ್ಗೆ ಅನುಮಾನಗೊಂಡ ಉದ್ಯಮಿ ಜಯನಗರ ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ಕೈಗೊಂಡ ಪೊಲೀಸರು ಜುಲೈ 28ರಂದು ನಕಲಿ ಕೀ ಹಾಗೂ ನಗದು ಸಮೇತ ಕಾರ್ತಿಕ್‌ನನ್ನು ಆತನ ಮನೆಯಲ್ಲೇ ವಶಕ್ಕೆ ಪಡೆದಿದ್ದರು. ಆತನನ್ನು ವಿಚಾರಣೆಗೊಳಪಡಿಸಿದಾಗ ಸಾಲ ತೀರಿಸಲು ತಾನು ಕಳ್ಳತನ ಎಸಗಿರುವುದಾಗಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕದ್ದ ಚಿನ್ನದ ಪೈಕಿ ತ್ಯಾಗರಾಜನಗರದ ಜ್ಯುವೆಲ್ಲರಿ ಅಂಗಡಿ ಹಾಗೂ ಫೈನಾನ್ಸ್ ಕಂಪನಿಯಲ್ಲಿ ಕೆಲವನ್ನು ಅಡವಿಟ್ಟು ಹಣ ಪಡೆದುಕೊಂಡಿದ್ದ. ಸದ್ಯ ಅವುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿ ಕಾರ್ತಿಕ್‌ನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



