ಕಾಡಾನೆಗಳ ಚಲನವಲನಗಳ ಮೇಲೆ ನಿಗಾ ವಹಿಸುವ ಮೂಲಕ ದಶಕಗಳ ಕಾಡಾನೆ ಮತ್ತು ಮಾನವರ ನಡುವಿನ ಸಂಘರ್ಷಕ್ಕೆ ತೆರೆ ಎಳೆಯುವ ಮಹತ್ವಾಕಾಂಕ್ಷಿ ಥರ್ಮಲ್ ಡ್ರೋಣ್ ಸ್ಕ್ವಾಡ್ ತಂತ್ರಜ್ಞಾನಕ್ಕೆ ಹಾಸನದಲ್ಲಿ ಚಾಲನೆ ನೀಡಲಾಗಿದೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೋಮವಾರ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಿರ್ಮಾಣಗೊಂಡ ಬೆಲಸಿಂದ ಉದ್ಯಾನ ಮತ್ತು ಹಾಸನ ಜಿಲ್ಲಾ ಆನೆ ಕಾರ್ಯಪಡೆಯ ಸಮಗ್ರ ತಂತ್ರಜ್ಞಾನ ಆಧಾರಿತ ಥರ್ಮಲ್ ಡ್ರೋನ್ ಸ್ಕ್ವಾಡ್ ಉದ್ಘಾಟಿಸಿದ್ದಾರೆ.
ಹಾಸನ ಜಿಲ್ಲೆಯಲ್ಲಿನ ಸಕಲೇಶಪುರ, ಆಲೂರು, ಬೇಲೂರು ಭಾಗದಲ್ಲಿನ ಸುಮಾರು 70ಕ್ಕೂ ಹೆಚ್ಚು ಕಾಡಾನೆಗಳು ತಾಲೂಕಿನ ವಿವಿಧ ಕಾಫಿ ತೋಟಗಳಲ್ಲಿ ಹಿಂಡು ಹಿಂಡಾಗಿ ಬೀಡು ಬಿಟ್ಟಿವೆ. ಅದರಲ್ಲೂ ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯೇ ಇವುಗಳ ಆವಾಸ ಸ್ಥಾನವಾಗಿದೆ. ಹಾಗಾಗಿ ಆನೆ ಕಾರ್ಯಪಡೆಯ ಕಚೇರಿಯನ್ನ ಸಕಲೇಶಪುರದಿಂದ ಬಿಕ್ಕೋಡಿಗೆ ಸ್ಥಳಾಂತರಿಸಲಾಗಿದೆ. ಅಲ್ಲಿಯ ಈ ಕಚೇರಿಗೆ ಈ ಥರ್ಮಲ್ ಡ್ರೋನ್ ಸ್ಕ್ವಾಡ್ ಹಸ್ತಾಂತರ ಮಾಡಲಾಗಿದೆ.
ಅತ್ಯಾಧುನಿಕ ಥರ್ಮಲ್ ಡ್ರೋನ್ ಕ್ಯಾಮೆರಾ:
ಹಗಲು ಮತ್ತು ರಾತ್ರಿ ಎನ್ನದೇ ಕಾಡಾನೆಗಳ ಚಲನವಲನ ಸೆರೆ ಹಿಡಿಯಬಲ್ಲ ಸಾಮರ್ಥ್ಯವಿರುವ ಅತ್ಯಾಧುನಿಕ ಥರ್ಮಲ್ ಡೋನ್ ಇದಾಗಿದ್ದು, ಕಾರ್ಯಪಡೆಯ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಅತ್ಯಾಧುನಿಕ ಥರ್ಮಲ್ ಡ್ರೋನ್ ಕ್ಯಾಮೆರಾವನ್ನು ಮೊದಲ ಬಾರಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ತರಿಸಲಾಗಿತ್ತು. ಅಲ್ಲಿಂದ ವಿವಿಧೆಡೆ ಈ ಡ್ರೋನ್ ಸ್ಕ್ವಾಡ್ ಆರಂಭಿಸಲಾಗಿದ್ದು, ಇದೀಗ ಹಾಸನ ಜಿಲ್ಲೆಯಲ್ಲೂ ಕಾರ್ಯಾರಂಭ ಮಾಡಿದೆ.
ಥರ್ಮಲ್ ಡ್ರೋಣ್ ಕ್ಯಾಮರಾ ವಿಶೇಷತೆ?
ಥರ್ಮಲ್ ಡ್ರೋನ್ ಕ್ಯಾಮರಾಗೆ ಮೂರು ಬ್ಯಾಟರಿಗಳಿದ್ದು, ತಲಾ 40 ನಿಮಿಷದವರೆಗೆ ಚಾರ್ಜ್ ಇರುತ್ತವೆ. ಆನೆಗಳು ಎಲ್ಲಿವೆ ಎಂಬುದರ ಆಧಾರದ ಮೇಲೆ ರಾತ್ರಿ ಮತ್ತು ಹಗಲು ಕ್ಯಾಮರಾ ಚಾಲನೆ ಮಾಡಲಾಗುತ್ತದೆ. ಆನೆಗಳು ಪತ್ತೆಯಾದ ತಕ್ಷಣ ಕ್ಯಾಮರಾದಲ್ಲಿ ಲೊಕೇಷನ್ ಸಹಿತ ಚಿತ್ರ ಸೆರೆ ಹಿಡಿದು, ಅರಣ್ಯ ಇಲಾಖೆ ಸಿಬ್ಬಂದಿಗೆ ಕಳುಹಿಸಲಾಗುತ್ತದೆ. ಕೂಡಲೇ ಅವರು ಕಾರ್ಯಪ್ರವೃತ್ತರಾಗಿ ಆನೆಗಳನ್ನು ಮರಳಿ ಕಾಡಿಗೆ ಕಳುಹಿಸುವ ಕೆಲಸ ಮಾಡುತ್ತಾರೆ. ಅಲ್ಲದೇ ಸ್ಥಳೀಯರಿಗೂ ಮುನ್ನೆಚ್ಚರಿಕೆ ನೀಡಲು ಅನುಕೂಲ ಆಗಲಿದೆಯಂತೆ.
ಜಿಪಿಎಸ್ ಮೂಲಕ ಕಾರ್ಯಾಚರಣೆ ಮಾಡುವ ಡ್ರೋನ್ ಕ್ಯಾಮರಾ: GPS ಮೂಲಕ ಲೊಕೇಷನ್ ನಿಗದಿ ಮಾಡಿದರೆ, ಥರ್ಮಲ್ ಡ್ರೋನ್ ಅಲ್ಲಿಯವರೆಗೂ ನಿರಾಯಾಸವಾಗಿ ಪ್ರಯಾಣಿಸುತ್ತದೆ. ಜೇನುನೊಣದ ಮಾದರಿಯಲ್ಲಿಯೇ ಶಬ್ದ ಮಾಡುವುದರಿಂದ ಆನೆ, ಹುಲಿ ಸೇರಿದಂತೆ ಯಾವುದೇ ಪ್ರಾಣಿಗಳಿಗೂ ತೊಂದರೆ ಆಗುವುದಿಲ್ಲ. ಆನೆಗಳ ನಿರ್ದಿಷ್ಟ ಜಾಗದ ಚಿತ್ರದ ಸೆರೆ ಹಿಡಿದ ಕೂಡಲೇ ಆನೆ ಕಾರ್ಯಪಡೆಗೆ ರವಾನಿಸಲಾಗುತ್ತದೆ.
ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಮಾತನಾಡಿ, ‘ಅತ್ಯಾಧುನಿಕ ಥರ್ಮಲ್ ಡ್ರೋನ್ ಇದಾಗಿದ್ದು, ಇದನ್ನು ಬಳಸಲು ಕಾರ್ಯಪಡೆಯ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಜೇನುನೊಣದ ಮಾದರಿಯಲ್ಲಿಯೇ ಶಬ್ದ ಮಾಡುವುದರಿಂದ ಆನೆ, ಹುಲಿ ಸೇರಿದಂತೆ ಯಾವುದೇ ಪ್ರಾಣಿಗಳಿಗೂ ತೊಂದರೆ ಆಗುವುದಿಲ್ಲ. ಆನೆಗಳ ನಿರ್ದಿಷ್ಟ ಜಾಗದ ಚಿತ್ರದ ಸೆರೆ ಹಿಡಿದ ಕೂಡಲೇ ಆನೆ ಕಾರ್ಯಪಡೆಗೆ ರವಾನಿಸಲಾಗುತ್ತದೆ’ ಎಂದು ಹೇಳಿದ್ದಾರೆ.



