ಪುಷ್ಪ-2 ಚಿತ್ರದ ಪ್ರದರ್ಶನದ ವೇಳೆ ನಡೆದ ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟ ಘಟನೆಗೆ ಸಂಬಂಧಿಸಿ ಹೈದರಾಬಾದ್ ಪೊಲೀಸರು ನಟ ಅಲ್ಲು ಅರ್ಜುನ್ ವಿರುದ್ಧ ಕೇಸು ದಾಖಲಿಸಿದ್ದಾರೆ.
ಪುಷ್ಪ-2 ಚಿತ್ರದ ಪ್ರೀಮಿಯರ್ ಶೋ ವೇಳೆ ಯಾವುದೇ ಮಾಹಿತಿ ನೀಡದೇ ಸಂಧ್ಯಾ ಥಿಯೇಟರ್ ಗೆ ಅಲ್ಲು ಅರ್ಜುನ್ ಭೇಟಿ ನೀಡಿದ್ದರಿಂದ ಕಾಲ್ತುಳಿತ ಉಂಟಾಗಿದ್ದು, ಇದರಿಂದ ಮಹಿಳೆ ಮೃತಪಟ್ಟು ಆಕೆಯ ಮಗ ಗಂಭೀರವಾಗಿ ಗಾಯಗೊಂಡಿದ್ದ.ಅಲ್ಲು ಅರ್ಜುನ್ ಅಲ್ಲದೇ ಸಂಧ್ಯಾ ಥಿಯೇಟರ್ ಮಾಲೀಕರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿನಿಮಾ ಬಿಡುಗಡೆ ವೇಳೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡದೇ ಇರುವುದು ಹಾಗೂ ಪೊಲೀಸರ ಗಮನಕ್ಕೆ ವಿಷಯ ತಾರದೇ ಇರುವ ಬಗ್ಗೆ ಸಂಧ್ಯಾ ಥಿಯೇಟರ್ ಮಾಲೀಕರ ವಿರುದ್ಧವೂ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಆಯುಕ್ತ ಸಿವಿ ಆನಂದ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಗುರುವಾರ ಚಿತ್ರ ಬಿಡುಗಡೆ ಆದಾಗ ಅಲ್ಲು ಅರ್ಜುನ್ ಥಿಯೇಟರ್ ಗೆ ಭೇಟಿ ನೀಡುವ ಬಗ್ಗೆ ಚಿತ್ರ ತಂಡವಾಗಲಿ, ಥಿಯೇಟರ್ ಕಡೆಯವರಾಗಲಿ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದರು.
ಥಿಯೇಟರ್ ಬಳಿ ಕೇವಲ ಒಂದು ಗೇಟ್ ಮಾತ್ರ ಇದ್ದು, ನಿರ್ಗಮನ ಮತ್ತು ಆಗಮನಕ್ಕೆ ಪ್ರತ್ಯೇಕ ಗೇಟುಗಳು ಇರಲಿಲ್ಲ. ಅಲ್ಲದೇ ಜನದಟ್ಟಣೆ ನಿಯಂತ್ರಿಸಲು ಯಾವುದೇ ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿರಲಿಲ್ಲ ಎಂದು ಅವರು ವಿವರಿಸಿದರು.
ಬುಧವಾರ ತಡರಾತ್ರಿ ಪುಷ್ಪ-2 ಚಿತ್ರ ಬಿಡುಗಡೆ ಆಗಿದ್ದು, ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಅವರೊಂದಿಗೆ ಅಲ್ಲು ಅರ್ಜುನ್ ಥಿಯೇಟರ್ ಗೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲು ಅರ್ಜುನ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರಿಂದ ಕಾಲ್ತುಳಿತ ಉಂಟಾಯಿತು.
ಕಾಲ್ತುಳಿತದಲ್ಲಿ 35 ವರ್ಷದ ಮಹಿಳೆ ಮೃತಪಟ್ಟಿದ್ದು, ಆಕೆಯ ಒಂಬತ್ತು ವರ್ಷದ ಮಗ ಉಸಿರುಗಟ್ಟಿದ ಪರಿಣಾಮ ಅಸ್ವಸ್ಥಗೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನೂಕುನುಗ್ಗಲಿನಲ್ಲಿ ಥಿಯೇಟರ್ನ ಮುಖ್ಯ ಗೇಟ್ ಕುಸಿದಿದೆ. ಗುಂಪನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಲಾಠಿ ಚಾರ್ಜ್ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಘಟನೆ ಬಗ್ಗೆ ಅಲ್ಲು ಅರ್ಜುನ್ ಆಗಲಿ ಅಥವಾ ಸಿನಿಮಾ ತಂಡದಿಂದ ಆಗಲಿ ಯಾವುದೇ ಹೇಳಿಕೆ ಬಿಡುಗಡೆ ಆಗಿಲ್ಲ.