ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 10.75 ಕೋಟಿ ದುಬಾರಿಗೆ ಬೆಲೆಗೆ ಸೇರ್ಪಡೆಯಾದ ಮಧ್ಯಮ ವೇಗಿ ಭುವನೇಶ್ವರ್ ಕುಮಾರ್ ದೇಶೀಯ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ.
ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಜಾರ್ಖಂಡ್ ವಿರುದ್ಧದ ಸೈಯ್ಯದ್ ಮುಷ್ತಾಕ್ ಅಲಿ ಟಿ-20 ಪಂದ್ಯದಲ್ಲಿ ಉತ್ತರ ಪ್ರದೇಶ ಪರ ಭುವನೇಶ್ವರ್ ಕುಮಾರ್ ಹ್ಯಾಟ್ರಿಕ್ ವಿಕೆಟ್ ಪಡೆದು ಭರ್ಜರಿಯಾಗಿ ಫಾರ್ಮ್ ಗೆ ಮರಳಿದ್ದೂ ಅಲ್ಲದೇ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಮುಂಬೈ ಒಡ್ಡಿದ 161 ರನ್ ಗಳ ಗುರಿ ಬೆಂಬತ್ತಿದ ಜಾರ್ಖಂಡ್ ತಂಡ ಉತ್ತಮ ಸ್ಥಿತಿಯಲ್ಲಿದ್ದಾಗ ದಾಳಿಗಿಳಿದ ಭುವನೇಶ್ವರ್ ಕುಮಾರ್ 17ನೇ ಓವರ್ ನಲ್ಲಿ ಹ್ಯಾಟ್ರಿಕ್ ಪಡೆಯುವ ಮೂಲಕ ತಂಡಕ್ಕೆ 10 ರನ್ ಗಳ ರೋಚಕ ಜಯ ತಂದುಕೊಟ್ಟರು.
ಪಂದ್ಯದ ಮೊದಲ ಅವಧಿಯಲ್ಲಿ 3 ಓವರ್ ಎಸೆದು ಕೇವಲ 6 ರನ್ ಬಿಟ್ಟುಕೊಟ್ಟಿದ್ದ ಮೀರತ್ ಮೂಲದ ವೇಗಿ ಭುವನೇಶ್ವರ್ ತನ್ನ ಕೊನೆಯ ಓವರ್ ನಲ್ಲಿ ರಾಬಿನ್ ಮಿನ್ಜ್, ಬಾಲಕೃಷ್ಣ ಮತ್ತು ವಿವೇಕ್ ಆನಂದ್ ತಿವಾರಿ ಅವರನ್ನು ಸತತ ಮೂರು ಎಸೆತಗಳಲ್ಲಿ ಔಟ್ ಮಾಡಿ ಹ್ಯಾಟ್ರಿಕ್ ಸಾಧನೆ ಮಾಡಿದರು.
10 ರನ್ ಗಳಿಂದ ಜಯ ಸಾಧಿಸಿದ ಮುಂಬೈ ತಂಡಕ್ಕೆ ಇದು ಟೂರ್ನಿಯಲ್ಲಿ ಸತತ 7ನೇ ಗೆಲುವಾಗಿದೆ. ಭುವನೇಶ್ವರ್ 2012-13ರಲ್ಲಿ 90 ವಿಕೆಟ್ ಪಡೆದು ವರ್ಷದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ 2ನೇ ಬೌಲರ್ ಎನಿಸಿಕೊಂಡರು. ಅಲ್ಲದೇ ಸೈಯ್ಯದ್ ಮುಷ್ತಕ್ ಅಲಿ ಟಿ-20 ಟೂರ್ನಿಯಲ್ಲಿ ಒಟ್ಟಾರೆ 176 ವಿಕೆಟ್ ಪಡೆದ ಸಾಧನೆ ಮಾಡಿದರು.
ಫಾರ್ಮ್ ನಲ್ಲಿ ಇಲ್ಲದ ಭುವನೇಶ್ವರ್ ಕುಮಾರ್ ಅವರನ್ನು 10.75 ಕೋಟಿ ರೂ. ನೀಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇತ್ತೀಚೆಗೆ ಅಬುಧಾಬಿಯಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಖರೀದಿಸಿತ್ತು. ಆರ್ ಸಿಬಿ ಆಯ್ಕೆ ಬಗ್ಗೆ ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ಭುವನೇಶ್ವರ್ ಅದ್ಭುತ ಬೌಲಿಂಗ್ ಮೂಲಕ ಭರ್ಜರಿಯಾಗಿ ಫಾರ್ಮ್ ಗೆ ಮರಳಿದ ಸಿಹಿ ಸುದ್ದಿ ನೀಡಿದ್ದಾರೆ.