ಸುಕುಮಾರ್ ನಿರ್ದೇಶಿಸಿ ಅಲ್ಲು ಅರ್ಜುನ್ ನಟಿಸಿರುವ ಬಹು ನಿರೀಕ್ಷಿತ ಪುಷ್ಪ-2 ಚಿತ್ರ ಬಿಡುಗಡೆಗೆ ಮುನ್ನವೇ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಇದೀಗ ಟಿಕೆಟ್ ಬುಕ್ಕಿಂಗ್ ನಲ್ಲೂ ಆರ್ ಆರ್ ಆರ್ ದಾಖಲೆ ಮುರಿದಿದೆ.
ಪುಷ್ಪ-2 ಚಿತ್ರದ ಟಿಕೆಟ್ ಬುಕ್ಕಿಂಗ್ ಆರಂಭವಾದ ಬೆನ್ನಲ್ಲೇ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದುವರೆಗೂ 21,42,071 ಟಿಕೆಟ್ ಗಳು ಮಾರಾಟವಾಗಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ನಿಂದಲೇ ಪುಷ್ಪ-2 ಚಿತ್ರ 68.16 ಕೋಟಿ ಗಳಿಸುವ ಮೂಲಕ ಆರ್ ಆರ್ ಆರ್ ದಾಖಲೆ ಮುರಿದಿದೆ.
ಎಸ್.ಎಸ್. ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರ ಮುಂಗಡ ಟಿಕೆಟ್ ಬುಕ್ಕಿಂಗ್ ನಿಂದ 58.73 ಕೋಟಿ ರೂ. ಸಂಪಾದಿಸುವ ಮೂಲಕ ದಾಖಲೆ ಬರೆದಿತ್ತು. ಇದೀಗ ಈ ದಾಖಲೆಯನ್ನು ಪುಷ್ಪ ಮುರಿದಿದೆ.
ಆರ್ ಆರ್ ಆರ್, ಕೆಜಿಎಫ್-2, ಬಾಹುಬಲಿ ಮುಂತಾದ ಚಿತ್ರಗಳು ಬುಕ್ ಮೈ ಶೋನಲ್ಲಿ ಅತ್ಯಂತ ವೇಗವಾಗಿ 12 ಲಕ್ಷ ಟಿಕೆಟ್ ಮುಂಗಡವಾಗಿ ಮಾರಾಟವಾದ ದಾಖಲೆ ಮಾಡಿದ್ದು, ಈ ದಾಖಲೆಯನ್ನು ಪುಷ್ಪ ಮುರಿದು 21 ಲಕ್ಷ ಟಿಕೆಟ್ ಮಾರಾಟದ ದಾಖಲೆ ಬರೆದಿದೆ.
ಬಿಡುಗಡೆಗೆ ಸಿದ್ಧವಾಗಿರುವ ಪುಷ್ಪ ಮೊದಲ ದಿನವೇ 250 ಕೋಟಿ ರೂ. ಗಳಿಸುವ ಮೂಲಕ ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ. ಚಿತ್ರ ತೆಲುಗು, ಹಿಂದಿ, ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗುತ್ತಿದೆ.
ಮೂಲಗಳ ಪ್ರಕಾರ ಮೊದಲ ದಿನ ದೇಶಾದ್ಯಂತ 20 ಲಕ್ಷ ಶೋಗಳು ನಡೆಯಲಿವೆ. ಪುಷ್ಪ-2 ಚಿತ್ರ ಬಿಡುಗಡೆ ಮುನ್ನವೇ 1000 ಕೋಟಿ ರೂ. ಗಳಿಸುವ ಮೂಲಕ ದಾಖಲೆ ಬರೆದಿದೆ. ವಿತರಣಾ ಹಂಚಿಕೆಯಿಂದ 640 ಕೋಟಿ ರೂ. ಡಿಜಿಟಲ್ ಹಕ್ಕು ಮಾರಾಟದಿಂದ 64 ಕೋಟಿ, ಸ್ಯಾಟಲೈಟ್ ಪ್ರಸಾರ ಮಾರಟ ಹಕ್ಕಿನಿಂದ 85 ಕೋಟಿ ರೂ. ಹಾಗೂ ಮ್ಯೂಸಿಕ್ ನಿಂದ 85 ಕೋಟಿ ರೂ. ಗಳಿಸಿದೆ ಎಂದು ಮೂಲಗಳು ತಿಳಿಸಿವೆ.