ಮಲಯಾಳಂ ಕಿರುತೆರೆ ನಟ ದಿಲೀಪ್ ಶಂಕರ್ ಶವವಾಗಿ ತಿರುವನಂತಪುರ ಹೋಟೆಲ್ ಕೊಠಡಿಯಲ್ಲಿ ಪತ್ತೆಯಾಗಿದ್ದಾರೆ.
‘ಪಂಚಾಗ್ನಿ’ ಧಾರಾವಾಹಿ ಚಿತ್ರೀಕರಣಕ್ಕಾಗಿ ತಿರುವನಂತಪುರಂಗೆ ಆಗಮಿಸಿದ್ದ ನಟ ದಿಲೀಪ್ ಶಂಕರ್ 2 ದಿನಗಳ ಹಿಂದೆ ಚಿತ್ರೀಕರಣಕ್ಕೆ ಹಾಜರಾಗಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಯನ್ನೂ ಪಡೆಯುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.
ನಾಲ್ಕು ದಿನಗಳ ಹಿಂದೆ ಹೋಟೆಲ್ ಗೆ ಆಗಮಿಸಿದ್ದ ಅವರು ಎರಡು ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ನಂತರ ಕಳೆದೆರಡು ದಿನಗಳಿಂದ ಹೋಟೆಲ್ ನಿಂದ ಹೊರಗೆ ಬಂದಿರಲಿಲ್ಲ. ಅಲ್ಲದೇ ಯಾರ ಜೊತೆ ಸಂಪರ್ಕವನ್ನು ಮಾಡಿರಲಿಲ್ಲ.
ಡಿ.29ರಂದು ರೂಮ್‌ನಿಂದ ದುರ್ವಾಸನೆ ಬಂದ ಹಿನ್ನೆಲೆ ಪರಿಶೀಲನೆ ನಡೆಸಿದಾಗ ದಿಲೀಪ್ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಸಾವಿಗೆ ನಿಖರವಾದ ಕಾರಣ ಪತ್ತೆಯಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಿಲೀಪ್ ಅವರ ಸಹ ನಟರು ಸಹ ಸಂಪರ್ಕಿಸಲು ಪ್ರಯತ್ನಿಸಿದ್ದು, ಯಾವುದೇ ಪ್ರತಿಕ್ರಿಯೆ ದೊರೆಯದೇ ಇದ್ದಾಗ ಹೋಟೆಲ್ ಗೆ ಭೇಟಿ ನೀಡಿದ್ದಾರೆ.