ತಮಿಳು ಚಿತ್ರರಂಗದಲ್ಲಿ ಖ್ಯಾತ ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ ಮತ್ತು ನಟರಾಗಿ ಜನಪ್ರಿಯರಾಗಿದ್ದ ಭಾರತಿರಾಜ ಅನಾರೋಗ್ಯದಿಂದ ಬುಧವಾರ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
ವಯೋಸಹಜ ಕಾಯಿಲೆಗಳು ಮತ್ತು ತೀವ್ರ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಭಾರತಿರಾಜ ಅವರನ್ನು ಸುಮಾರು 6 ತಿಂಗಳ ಹಿಂದೆ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು.
ಚೇತರಿಸಿಕೊಳ್ಳುತ್ತಿದ್ದ ಅವರನ್ನು ವೈದ್ಯರು ಮನೆಯಲ್ಲಿ ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ಆದರೆ ದಿಢೀರ್ ಅಸ್ವಸ್ಥಗೊಂಡ ಅವರು ಬೆಳಿಗ್ಗೆ ನಿಧನರಾದರು. ಪುತ್ರ, ತಮಿಳು ನಟ – ನಿರ್ದೇಶಕ ಮನೋಜ್ ಭಾರತಿರಾಜ 2025ರ ಮಾರ್ಚ್ 25ರಂದು ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾದ ಒಂದು ವರ್ಷದ ಬಳಿಕ ಭಾರತಿರಾಜ ವಿಧಿವಶರಾಗಿದ್ದಾರೆ.
ಭಾರತಿರಾಜ ನಿಧನಕ್ಕೆ ಪವನ್ ಕಲ್ಯಾಣ್, ಸಿಎಂ ವಿಜಯ್, ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ತಮಿಳು, ತಲುಗು ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ಆಘಾತ ವ್ಯಕ್ತಪಡಿಸಿದ್ದಾರೆ.
ಭಾರತಿರಾಜ 1941ರ ಜುಲೈ 17ರಂದು ಥೇಣಿ-ಅಲ್ಲಿನಗರಂನಲ್ಲಿ ಜನಿಸಿದರು. ಮಾಯಾ ತೇವರ್ ಮತ್ತು ಕರುಥಮ್ಮ ಪೋಷಕರು. ನಿರ್ದೇಶಕರ ಮೂಲ ಹೆಸರು ಚಿನ್ನಸಾಮಿ. ಶಾಲಾ ದಿನಗಳಲ್ಲಿ ಅವರು ಸಾಹಿತ್ಯ, ಭಾಷಣ ಸ್ಪರ್ಧೆಗಳು ಮತ್ತು ರಂಗ ನಾಟಕಗಳಲ್ಲಿ ತೀವ್ರ ಆಸಕ್ತಿ ಹೊಂದಿದ್ದರು.
ನಂತರ ತಮ್ಮ ಊರಿನಲ್ಲಿ ಸ್ವಲ್ಪ ಕಾಲ ನೈರ್ಮಲ್ಯ ನಿರೀಕ್ಷಕರಾಗಿ ಕೆಲಸ ಮಾಡಿದರು. ಸಿನಿಮಾ ಮೇಲಿನ ಉತ್ಸಾಹದಿಂದ ಪ್ರೇರಿತರಾಗಿ ನಂತರ ಚೆನ್ನೈಗೆ ತೆರಳಿದರು. ಚಲನಚಿತ್ರೋದ್ಯಮವನ್ನು ಪ್ರವೇಶಿಸುವ ಸಂದರ್ಭ ಹಲವಾರು ಸವಾಲುಗಳನ್ನು ಎದುರಿಸಿದರು. ಅದಾಗ್ಯೂ, ಅಡೆತಡೆಗಳನ್ನು ಮೆಟ್ಟಿ ಭಾರತೀಯ ಚಿತ್ರರಂಗದಲ್ಲಿ ತಮ್ಮ ಗುರುತನ್ನು ಸ್ಥಾಪಿಸಿಕೊಂಡರು.
ಆರಂಭದಲ್ಲಿ ತಮ್ಮ ಜೀವನೋಪಾಯಕ್ಕಾಗಿ ರಂಗ ನಾಟಕಗಳಲ್ಲಿ ಮತ್ತು ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡಿದರು. ಅವರ ಪರಿಶ್ರಮ, ಛಲ ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಅವಕಾಶವನ್ನು ಪಡೆಯಲು ಸಹಾಯ ಮಾಡಿತು.
1977ರಲ್ಲಿ ’16 ವಯತಿನಿಲೆ’ ಚಿತ್ರದ ಮೂಲಕ ಭಾರತಿರಾಜರಿಗೆ ನಿರ್ದೇಶನದಲ್ಲಿ ದೊಡ್ಡ ಬ್ರೇಕ್ ಸಿಕ್ಕಿತು. ಮೊದಲ ಚಿತ್ರದಲ್ಲೇ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದರು. ಹೆಚ್ಚಿನ ಚಲನಚಿತ್ರಗಳನ್ನು ಸ್ಟುಡಿಯೋಗಳ ಒಳಗೇ ಚಿತ್ರೀಕರಿಸಲಾಗುತ್ತಿದ್ದ ಶ ಸಮಯದಲ್ಲಿ, ಭಾರತಿರಾಜ ನೈಜ ಹಳ್ಳಿಯಲ್ಲಿ ಚಿತ್ರೀಕರಿಸುವ ಮೂಲಕ ಗಮನ ಸೆಳೆದರು. ತಮ್ಮ ವಾಸ್ತವಿಕ ಕಥೆ ಹೇಳುವ ಶೈಲಿ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸಿದರು. ಈ ಚಿತ್ರವು ಭಾರತಿರಾಜ ಅವರ ವೃತ್ತಿಜೀವನದಲ್ಲಿ ಮಾತ್ರವಲ್ಲದೇ ಕಮಲ್ ಹಾಸನ್ ಮತ್ತು ರಜನಿಕಾಂತ್ ಅವರ ವೃತ್ತಿಜೀವನದಲ್ಲಿಯೂ ಒಂದು ಪ್ರಮುಖ ಮೈಲಿಗಲ್ಲಾಯಿತು.



