ರಾಜ್ಯಸಭಾ ಸ್ಥಾನವನ್ನು ನಾನಾಗಲಿ, ಕುಮಾರಸ್ವಾಮಿ ಆಗಲಿ ಕೇಳಿಲ್ಲ. ಒಂದು ರಾಜ್ಯಸಭಾ ಸ್ಥಾನಕ್ಕಾಗಿ ಬಜೆಪಿ ಜೊತೆಗಿನ ನಮ್ಮ ಮೈತ್ರಿ ಹಾಳಾಗಲ್ಲ. 10 ವರ್ಷದಿಂದ ಮೋದಿ ಜೊತೆ ಉತ್ತಮ ಸಂಬಂಧ ಹೊಂದಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ರಾಜ್ಯಸಭಾ ಸ್ಥಾನ ಕೈ ತಪ್ಪಿದ್ದಕ್ಕಾಗಿ ಕಾಂಗ್ರೆಸ್ ಆರೋಪಗಳ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಅವರು, 18 ಶಾಸಕರನ್ನು ಹೊಂದಿರುವ ನಮಗೆ ಬಿಜೆಪಿ ರಾಜ್ಯಸಭಾ ಸ್ಥಾನ ನೀಡಲು ಸಾಧ್ಯವೇ? ನಾವು ಕೇಳುವುದು ಸರಿಯಲ್ಲ. ಆದರೆ ನಮ್ಮ ಹಿತೈಷಿಗಳು ಹಾಗೂ ಪಕ್ಷದ ಸದಸ್ಯರು ಆಸೆ ವ್ಯಕ್ತಪಡಿಸಿದ್ದರು ಅಷ್ಟೆ ಎಂದರು.
ರಾಜ್ಯಸಭೆಗೆ ನನ್ನನ್ನು ಆಯ್ಕೆ ಮಾಡದೇ ಬಿಜೆಪಿ ಮೋಸ ಮಾಡಿದೆ ಎಂಬ ಪ್ರತಿಪಕ್ಷಗಳ ಆರೋಪ ಸರಿಯಲ್ಲ. ಮೋದಿ ಮಿತ್ರ ಪಕ್ಷಗಳ ಜೊತೆ ಚೆನ್ನಾಗಿಯೇ ಇದ್ದಾರೆ. ಉತ್ತಮವಾಗಿ ನಮ್ಮನ್ನು ನಡೆಸಿಕೊಳ್ಳುತ್ತಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.
ನಾವು ಎನ್ಡಿಎ ಜತೆ ಕೈ ಜೋಡಿಸಿದ್ದು, ನಮ್ಮ ಪಕ್ಷ ಅದರಲ್ಲೇ ಮುಂದುವರೆಯಲಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಕ್ಯಾಬಿನೆಟ್ ಸಚಿವರಾಗಿ ಮುಂದುವರೆದು, ದೇಶದ ಸೇವೆ ಮುಂದುವರೆಸಲಿದ್ದಾರೆ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು. ನಾನು ರಾಜ್ಯಸಭೆಗೆ ಸ್ಥಾನ ಬೇಕು ಎಂದರೆ, ಆ ಬಗ್ಗೆ ಪ್ರಧಾನಿ ಮತ್ತು ಗೃಹ ಸಚಿವರ ಜತೆ ಮಾತನಾಡುತ್ತಿದ್ದೆ. ಆದರೆ ನನಗೆ ಅದರಲ್ಲಿ ಆಸಕ್ತಿ ಇಲ್ಲ. ಹಾಗಾಗಿ ನಾನು ಈ ಸಂಬಂಧ ಯಾರನ್ನೂ ಭೇಟಿಯಾಗಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.



