ತಿರುವನಂತಪುರಂ(ಕೇರಳಂ): ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೇರಳದಲ್ಲಿ ಸಂಭವಿಸಿದ ಹಠಾತ್ ಪ್ರವಾಹ ಮತ್ತು ಭೂಕುಸಿತಗಳಿಗೆ 9 ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ನಾಪತ್ತೆಯಾಗಿದ್ದಾರೆ.
ಹಠಾತ್ ಪ್ರವಾಹ ಮತ್ತು ಭೂಕುಸಿತದಿಂದ ಮಲಪ್ಪುರಂನಲ್ಲಿ ಐವರು ಹಾಗೂ ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ ಮಲಪ್ಪುರಂನಲ್ಲಿ ನಾಪತ್ತೆಯಾಗಿರುವ ಹಲವಾರು ಮಂದಿಗಾಗಿ ಶೋಧ ಕಾರ್ಯಾಚರಣೆ ತೀವ್ರಗೊಂಡಿದೆ.
ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಮಲಪ್ಪುರಂ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಿದ್ದು, ಗಂಟೆಗೆ 40 ಕಿಲೋಮೀಟರ್ ವೇಗದವರೆಗೆ ಬಲವಾದ ಗಾಳಿ ಬೀಸುವ ಎಚ್ಚರಿಕೆಯನ್ನು ನೀಡಿದೆ. ವಿಶೇಷವಾಗಿ ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿ ಮಳೆತೀವ್ರಗೊಳ್ಳುತ್ತಿರುವುದರಿಂದ, ಅತ್ಯಂತ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಸೂಚಿಸಿದ್ದಾರೆ.
ಭಾನುವಾರ ನಿಲಂಬೂರಿನ ಅಮರಂಬಲಂನ ಟಿಕೆ ಕಾಲೋನಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಐವರು ಕೊಚ್ಚಿಹೋಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ನಿಯೋಜಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ರಕ್ಷಣಾ ಸಿಬ್ಬಂದಿ ಪೊಟ್ಟಿಕಲ್ಲು-ಮುಟ್ಟಿಕುಂಡು ಪ್ರದೇಶದಿಂದ ಒಬ್ಬರ ಮತ್ತು ಆಂಟೋನಿಕಾಡ್-ಅಯನಿಕುಂಡು ಪ್ರದೇಶದಿಂದ ಮತ್ತೊಬ್ಬರ ಮೃತದೇಹಗಳನ್ನು ಹೊರತೆಗೆದರು. ನಿನ್ನೆ ರಾತ್ರಿ ಕತ್ತಲಾದ ಕಾರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ರಕ್ಷಣಾ ಕಾರ್ಯಾಚರಣೆಯನ್ನು ಅಗ್ನಿಶಾಮಕ ಮತ್ತು ರಕ್ಷಣಾ ದಳದ ನೇತೃತ್ವದ ಇಂದು ಬೆಳಗ್ಗೆ ಪುನರಾರಂಭ ಮಾಡಿದೆ.
ಮತ್ತೊಂದು ಘಟನೆಯಲ್ಲಿ, ಚೆಕ್ಕಡ್‌ನ ಗುಂಪೊಂದರ ಇಬ್ಬರು ನದಿಯಲ್ಲಿ ಈಜಿ ಸುರಕ್ಷಿತ ಸ್ಥಳ ತಲುಪಿದ್ದಾರೆ. ಇದೇ ವೇಳೆ, ನದಿಯಲ್ಲಿ ಸಿಲುಕಿಕೊಂಡಿದ್ದ ಇತರೆ ನಾಲ್ವರನ್ನು ಸ್ಥಳೀಯರು ರಕ್ಷಿಸಿದರು.
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುತ್ತಿದೆ. ಈ ಹಿನ್ನೆಲೆ ಪ್ರತಿ ಗಂಟೆಗೊಮ್ಮೆ ಪರಿಸ್ಥಿತಿಯನ್ನು ಅವಲೋಕಿಸುವಂತೆ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಯವರ ಸೂಚನೆಯ ಮೇರೆಗೆ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತೆ ವಿಘ್ನೇಶ್ವರಿ ಅವರು ತುರ್ತು ಸಭೆಯನ್ನು ಕರೆದು, ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲಾಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿದರು. ಈ ಎರಡು ಜಿಲ್ಲೆಗಳ ನಿವಾಸಿಗಳಿಗೆ ಹವಾಮಾನಕ್ಕೆ ಸಂಬಂಧಿಸಿದ ಎಚ್ಚರಿಕೆಯ ಸಂದೇಶಗಳನ್ನು ಕಳುಹಿಸಲಾಗಿದೆ. ಸ್ಥಳೀಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲು ಮತ್ತು ಅಗತ್ಯವಿದ್ದಲ್ಲಿ ಸ್ಥಳಾಂತರ ಪ್ರಕ್ರಿಯೆಯನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.



