ನಿರೀಕ್ಷೆಗೂ ಮೀರಿ ಸುರಿದ ಮುಂಗಾರು ಮಳೆಯ ಆರ್ಭಟಕ್ಕೆ ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಒಂದೇ ದಿನ 6 ಮಂದಿ ಬಲಿಯಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಗುಡ್ಡ ಕುಸಿದ ಪರಿಣಾಮ ಅಜ್ಜಿ ಹಾಗೂ ಇಬ್ಬರು ಮೊಮ್ಮಕ್ಕಳು ಮೃತಪಟ್ಟಿದ್ದರೆ, ಮತ್ತೊಂದು ಪ್ರಕರಣದಲ್ಲಿ 6 ವರ್ಷದ ಮಗು ಸಾವಿಗೀಡಾಗಿದೆ. ಇದೇ ವೇಳೆ ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರು ಕಡಲಿನ ಅಬ್ಬರಕ್ಕೆ ಸಿಲುಕು ಅಸುನೀಗಿದ್ದಾರೆ.
ಮಂಗಳೂರಿನ ಉಳ್ಳಾಲದ ಮೊಂಟೆಪದವು ಬಳಿ ಗುರುವಾರ ತಡರಾತ್ರಿ ಗುಡ್ಡ ಕುಸಿದು ಎರಡು ಮನೆ ಬಿದ್ದಿದೆ. ಸ್ಥಳೀಯರ ನೆರವಿನೊಂದಿಗೆ ಎಸ್ ಡಿಆರ್ ಎಫ್ ಸಿಬ್ಬಂದಿ ನಾಲ್ಕು ಮಂದಿಯನ್ನು ರಕ್ಷಿಸಿದ್ದಾರೆ.
ಕಾಂತಪ್ಪ ಪೂಜಾರಿ ಎಂಬವರ ಮನೆ ಮೇಲೆ ಗುಡ್ಡ ಕುಸಿದಿದ್ದರಿಂದ ಕಾಂತಪ್ಪ ಪೂಜಾರಿ ಪತ್ನಿ ಪ್ರೇಮ ಪೂಜಾರಿ ಆರ್ಯನ್ (3) ಹಾಗೂ ಆರುಷ್ (2) ಮೃತಪಟ್ಟಿದ್ದಾರೆ. ಪ್ರೇಮಾ ಮತ್ತು ಆರ್ಯನ್ ಸ್ಥಳದಲ್ಲೇ ಅಸುನೀಗಿದರೆ 9 ಗಂಟೆಗಳ ಕಾರ್ಯಾಚರಣೆ ನಂತರ ರಕ್ಷಿಸಲಾಗಿದ್ದ ಆರುಷ್ ಆಸ್ಪತ್ರೆಯಲ್ಲಿ ಮೃತಪಟ್ಟಿದೆ.
ಮತ್ತೊಂದೆಡೆ ದೇರಳಕಟ್ಟೆ ಕಾನಕೆರೆಯ ಗುಡ್ಡ ಕುಸಿದು 6 ವರ್ಷದ ಮಗು ಫಾತಿಮಾ ನಯೀಮಾ ಮೃತಪಟ್ಟಿದೆ. ಎನ್ ಡಿಆರ್ ಎಫ್ ಪಡೆ ಹರಸಾಹಸಪಟ್ಟು ಆವಶೇಷಗಳಗಡಿಯಿಂದ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರೂ ಗಂಭೀರವಾಗಿ ಗಾಯಗೊಂಡಿದ್ದ ಮಗು ಇಹಲೋಕ ತ್ಯಜಿಸಿದೆ.
ಇದೇ ವೇಳೆ ನಡುಗುಡ್ಡದಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ನಾಡದೋಣಿ ಮಗುಚಿದ್ದರಿಂದ ಮೃತಪಟ್ಟಿದ್ದಾರೆ.
ಮಂಗಳೂರು ಕಡಲತೀರದ ತೋಟಬೆಂಗ್ರೆ ಅಳಿವೆ ಬಾಗಿಲು ಎಂಬಲ್ಲಿ ಈ ಘಟನೆ ನಡೆದಿದೆ. ತೋಟಬೆಂಗ್ರೆ ನಿವಾಸಿಗಳಾದ ಯಶವಂತ, ಕಮಲಾಕ್ಷ ಮೃತಪಟ್ಟಿದ್ದಾರೆ.
ಯಶವಂತ ಹಾಗೂ ಕಮಲಾಕ್ಷ ಅವರು ಮೀನುಗಾರಿಕೆಗೆ (Fishing) ತೆರಳಿದ್ದಾಗ ಕಡಲ ಅಲೆಗಳ ಅಬ್ಬರಕ್ಕೆ ನಾಡದೋಣಿ ಪಲ್ಟಿಯಾಗಿದೆ. ನಾಡದೋಣಿ ಪಲ್ಟಿಯಾಗಿ ಇಬ್ಬರು ಮೀನುಗಾರರು ನೀರು ಪಾಲಾಗಿದ್ದಾರೆ. ಇದೀಗ ನಾಡದೋಣಿಯ ಅವಶೇಷಗಳು ಕಡಲತೀರಕ್ಕೆ ಬಂದು ಬಿದ್ದಿದೆ. ನೀರಿನಲ್ಲಿ ಕಣ್ಮರೆಯಾಗಿರುವ ಮೀನುಗಾರರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ನಿರಂತರ ಮಳೆ ಸುರಿಯುತ್ತಿರುವುದರಿಂದ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಮನೆ, ಅಂಗಡಿ ಸೇರಿದಂತೆ ಹಲವು ಕಟ್ಟಡಗಳಿಗೆ ನೀರು ನುಗ್ಗಿದೆ. ಮಂಗಳೂರು ನಗರದ ರಸ್ತೆಗಳು ಕರೆಯಂತಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.



