ಪಾಕಿಸ್ತಾನ ಎಚ್ಚೆತ್ತುಕೊಳ್ಳುವ ಮುನ್ನವೇ ಭಾರತ ಬ್ರಹ್ಮೋಸ್ ಕ್ಷಿಪಣಿಗಳ ಮೂಲಕ ವಾಯುನೆಲೆಗಳ ಮೇಲೆ ದಾಳಿ ಮಾಡಿತ್ತು ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಮೊದಲ ಬಾರಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಮೇ 9 ಮತ್ತು 10ರಂದು ರಾವಲ್ಪಿಂಡಿ ವಿಮಾನ ನಿಲ್ದಾಣ ಸೇರಿದಂತೆ ಪಾಕಿಸ್ತಾನದ ಪ್ರಮುಖ ವಾಯುನೆಲೆಗಳ ಮೇಲೆ ಪಾಕಿಸ್ತಾನ ಸೇನೆ ಎಚ್ಚೆತ್ತುಕೊಳ್ಳುವ ಮುನ್ನವೇ ಬ್ರಹ್ಮೋಸ್ ದಾಳಿ ನಡೆಸಿತ್ತು ಎಂದು ಅವರು ಹೇಳಿದ್ದಾರೆ.
ಅಜರ್ ಬೈಜಾನ್ ನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಮೇ 10ರಂದು ಬೆಳಿಗ್ಗೆ ಪ್ರಾರ್ಥನೆ ನಂತರ ಭಾರತದ ಮೇಲೆ ದಾಳಿ ನಡೆಸಲು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ನಿರ್ಧರಿಸಿದ್ದರು. ಆದರೆ ಅದಕ್ಕೂ ಮುನ್ನವೇ ಭಾರತದ ಸೂಪರ್ ಸಾನಿಕ್ ಬ್ರಹ್ಮೋಸ್ ಕ್ಷಿಪಣಿಗಳು ಪಾಕಿಸ್ತಾನದ ವಾಯುನೆಲೆಗಳನ್ನು ಧ್ವಂಸಗೊಳಿಸಿದ್ದವು ಎಂದು ಅವರು ವಿವರಿಸಿದ್ದಾರೆ.
ಮೇ 10ರಂದು 4.30ಕ್ಕೆ ಭಾರತದ ಮೇಲೆ ದಾಳಿ ಮಾಡಲು ಪಾಕಿಸ್ತಾನ ಸೇನೆ ಸಿದ್ಧವಾಗಿತ್ತು. ಆದರೆ ಅದಕ್ಕೆ ಕೆಲವೇ ನಿಮಿಷಗಳ ಮುನ್ನ ಭಾರತ ಬ್ರಹ್ಮೋಸ್ ಮೂಲಕ ದಾಳಿ ನಡೆಸಿ ನಮ್ಮ ಎಲ್ಲಾ ಪ್ರಯತ್ನಗಳ ಸಿದ್ಧತೆಯನ್ನು ಹಾಳು ಮಾಡಿತ್ತು ಎಂದು ಅವರು ನುಡಿದರು.
ಭಾರತ ಮೇ 9 ಮತ್ತು 10 ರಂದು 10ರಿಂದ 15 ಬ್ರಹ್ಮೋಸ್ ಕ್ಷಿಪಣಿಗಳ ಮೂಲಕ ವಾಯುನೆಲೆ ಸೇರಿದಂತೆ ಪಾಕಿಸ್ತಾನದ ಉಗ್ರರ ಶಿಬಿರಗಳ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿತ್ತು.



