ಅಮೆರಿಕದ ಪೆಸಿಫಿಕ್ ದ್ವೀಪ ವನೌತುನಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಭೂಮಿ ಕಂಪನಕ್ಕೆ ಹಲವು ಕಟ್ಟಡಗಳು ಕುಸಿದುಬಿದ್ದಿವೆ.
ಮಂಗಳವಾರ ಮುಂಜಾನೆ ಸಂಭವಿಸಿದ ಭೂಕಂಪನ ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆ ದಾಖಲಿಸಿದೆ. ಅಮೆರಿಕದ ರಾಯಭಾರ ಕಚೇರಿ ಸೇರಿದಂತೆ ಹಲವು ಕಟ್ಟಡಗಳು ಕುಸಿದಿವೆ ಎಂದು ಹೇಳಲಾಗಿದೆ.
ರಾಜಧಾನಿ ಪೋರ್ಟ್ ವಿಲಾದಲ್ಲಿರುವ ಅಮೆರಿಕ, ಫ್ರಾನ್ಸ್ ಸೇರಿದಂತೆ ಹಲವು ರಾಷ್ಟ್ರಗಳ ರಾಯಭಾರ ಕಚೇರಿಗೆ ಹಾನಿಯಾಗಿವೆ. ಕಟ್ಟಡಗಳು ಕುಸಿದು ಪಾರ್ಕಿಂಗ್ ನಲ್ಲಿ ನಿಂತಿದ್ದ ಕಾರುಗಳ ಮೇಲೆ ಬಿದ್ದಿರುವ ದೃಶ್ಯಗಳು ಕಂಡು ಬಂದಿವೆ.
ಘಟನೆಯಲ್ಲಿ ಸಾವು-ನೋವಿನ ವರದಿ ಬಂದಿಲ್ಲ. ಮೂರು ಅಂತಸ್ತಿನ ಕಟ್ಟಡ ಸಂಪೂರ್ಣ ನೆಲಸಮವಾಗಿದೆ. ಅಲ್ಲಿ ಕಟ್ಟಡ ಇತ್ತು ಎಂಬ ಕುರುಹೇ ಇಲ್ಲ. ಒಂದು ವೇಳೆ ಕಟ್ಟಡದಲ್ಲಿ ಯಾರಾದರೂ ಇದ್ದಿದ್ದರೆ ಅವರು ಬದುಕುಳಿದಿರುವ ಸಾಧ್ಯತೆ ಇಲ್ಲ ಎಂದು ಸ್ಥಳೀಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕ ಕಟ್ಟಡಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಿದೆ.
ವನೌತುನಲ್ಲಿ ಭೂಕಂಪನ ಸರ್ವೆ ಸಾಮಾನ್ಯವಾಗಿದ್ದು, ಸುಮಾರು 3.20 ಲಕ್ಷ ಜನರು ಜೀವ ಕೈಯಲ್ಲಿ ಹಿಡಿದುಕೊಂಡೇ ಬದುಕುತ್ತಿದ್ದಾರೆ. ಊಹಿಸಲು ಅಸಾಧ್ಯವಾದ ಪ್ರಾಕೃತಿಕ ಪ್ರದೇಶ ಎಂದು ವನೌತು ಪಾತ್ರವಾಗಿದೆ.
ಭೂಕಂಪನ, ಸುನಾಮಿ, ಜ್ವಾಲಾಮುಖಿ ಸ್ಫೋಟ, ಪ್ರವಾಹ ಸೇರಿದಂತ ಯಾವುದೇ ಪ್ರಾಕೃತಿಕ ಅನಾಹುತಗಳು ಯಾವಾಗ ಬೇಕಾದರೂ ಸಂಭವಿಸಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.