ಅಮೆರಿಕ ತಲುಪಬಲ್ಲ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿಯನ್ನು ಪಾಕಿಸ್ತಾನ ಸೇನೆ ರಹಸ್ಯವಾಗಿ ಅಭಿವೃದ್ಧಿಪಡಿಸುತ್ತಿದೆ.
ವಾಷಿಂಗ್ಟನ್ ನಲ್ಲಿರುವ ಗುಪ್ತಚರರು ಈ ಬಗ್ಗೆ ವರದಿ ಮಾಡಿದ್ದು, ಭಾರತ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿದ ಬೆನ್ನಲ್ಲೇ ಚೀನಾ ಸಹಕಾರದೊಂದಿಗೆ ಪಾಕಿಸ್ತಾನ ರಹಸ್ಯವಾಗಿ ಖಂಡಾಂತರ ಕ್ಷಿಪಣಿ ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಿದೆ.
ಪರಮಾಣು ವಿಷಯದಲ್ಲಿ ಪ್ರಮುಖ ಸಲಹೆಗಾರರಾಗಿ ಅಮೆರಿಕವನ್ನು ಕೂಡ ತಲುಪಬಲ್ಲ ಕ್ಷಿಪಣಿಯನ್ನು ಪಾಕಿಸ್ತಾನ ಸೇನೆ ಅಭಿವೃದ್ಧಿಪಡಿಸುತ್ತಿದೆ. ಇದು ನೆರೆಯ ಭಾರತಕ್ಕೆ ಮಾತ್ರವಲ್ಲ ಇತರೆ ದೇಶಗಳಿಗೂ ಆತಂಕ ಉಂಟು ಮಾಡಲಿದೆ ಎಂದು ವರದಿ ಆತಂಕ ವ್ಯಕ್ತಪಡಿಸಿದೆ.
ಅಮೆರಿಕ ಅಲ್ಲದೇ ಪ್ರಸ್ತುತ ರಷ್ಯಾ, ಚೀನಾ, ಉತ್ತರ ಕೊರಿಯಾ ಬಳಿ ಮಾತ್ರ ಇಂತಹ ಸಾವಿರಾರು ಕಿ.ಮೀ. ದೂರ ಚಿಮ್ಮಬಲ್ಲ ಖಂಡಾಂತರ ಕ್ಷಿಪಣಿಗಳಿವೆ. ಈ ರೀತಿಯ ಕ್ಷಿಪಣಿ ಹೊಂದಲು ಸಾಧ್ಯವಾದರೆ ಆಪ್ತ ರಾಷ್ಟ್ರವಾದ ಅಮೆರಿಕಕ್ಕೂ ಇದು ಕಂಟಕವಾಗಲಿದೆ ಎಂದು ಹೇಳಲಾಗಿದೆ.
ಪಾಕಿಸ್ತಾನ ಈ ಹಿಂದಿನಿಂದಲೂ ಸಮೀಪದ, ಅಲ್ಪಾವಧಿಯ ಹಾಗೂ ದೂರಗಾಮಿ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಹೇಳಿಕೊಂಡು ಬಂದಿದೆ. ಆದರೆ ಈ ನಿಟ್ಟಿನಲ್ಲಿ ಸಾಕಷ್ಟು ಯಶಸ್ಸು ಸಾಧ್ಯವಾಗಿರಲಿಲ್ಲ. ಆದರೆ ಆಪರೇಷನ್ ಸಿಂಧೂರ ನಂತರ ಪಾಕಿಸ್ತಾನ ಈ ಪ್ರಯತ್ನವನ್ನು ಗಂಭೀರವಾಗಿ ಪರಿಗಣಿಸಿದೆ.



