ಎಡಗೈ ಬ್ಯಾಟ್ಸ್ ಮನ್ ಮತ್ತು ವಿಕೆಟ್ ಕೀಪರ್ ಇಶಾನ್ ಕಿಶನ್ ಸಿಡಿಸಿದ ಚೊಚ್ಚಲ ಶತಕದ ಸಹಾಯದಿಂದ ಭಾರತ ತಂಡ 46 ರನ್ ಗಳಿಂದ ಪ್ರವಾಸಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ 5 ಪಂದ್ಯಗಳ ಟಿ-20 ಸರಣಿಯನ್ನು 4-1ರಿಂದ ವಶಪಡಿಸಿಕೊಂಡಿತು.
ತಿರುವನಂಪುರಂನಲ್ಲಿ ಶನಿವಾರ ನಡೆದ ೫ನೇ ಹಾಗೂ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಗೆ 271 ರನ್ ಬೃಹತ್ ಮೊತ್ತ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ನ್ಯೂಜಿಲೆಂಡ್ 19.4 ಓವರ್ ಗಳಲ್ಲಿ 225 ರನ್ ಗಳಿಗೆ ಆಲೌಟಾಯಿತು.
ನ್ಯೂಜಿಲೆಂಡ್ ತಂಡ ಒಂದು ಕಡೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರೂ ಆರಂಭಿಕ ಫಿನ್ ಅಲಾನ್ 38 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್ ಒಳಗೊಂಡ 80 ರನ್ ಸಿಡಿಸಿ ಹೋರಾಟ ನಡೆಸಿದರು. ಆದರೆ ಅವರಿಗೆ ಮತ್ತೊಂದು ತುದಿಯಲ್ಲಿ ಸೂಕ್ತ ಬೆಂಬಲ ದೊರೆಯಲಿಲ್ಲ.
ಡ್ರೈಲ್ ಮಿಚೆಲ್ ಒಂದೇ ಓವರ್ ನಲ್ಲಿ 24 ರನ್ ಕೊಳ್ಳೆ ಹೊಡೆದರೂ ಅಷ್ಟೇ ಬೇಗ (26) ನಿರ್ಗಮಿಸಿದರು. ಇಶ್ ಸೋಧಿ 33 ರನ್ ಬಾರಿಸಿ ಕೊನೆಯ ಹಂತದಲ್ಲಿ ಹೋರಾಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
ಭಾರತದ ಪರ ಅರ್ಷದೀಪ್ ಸಿಂಗ್ 5 ವಿಕೆಟ್ ಪಡೆದು ಕಿವೀಸ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಅಕ್ಸರ್ ಪಟೇಲ್ 3 ವಿಕೆಟ್ ಪಡೆದು ಗಮನ ಸೆಳೆದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ಮತ್ತೊಮ್ಮೆ ಅಭಿಷೇಕ್ ಶರ್ಮ (30) ಮತ್ತು ಸಂಜು ಸ್ಯಾಮ್ಸನ್ (6) ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಯಿತು. ಆದರೆ ಇಶಾನ್ ಕಿಶನ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಎರಡನೇ ವಿಕೆಟ್ ಗೆ 137 ರನ್ ಪೇರಿಸಿ ಭರ್ಜರಿ ಬುನಾದಿ ಹಾಕಿಕೊಟ್ಟರು.
ಇಶಾನ್ ಕಿಶನ್ 43 ಎಸೆತಗಳಲ್ಲಿ 6 ಬೌಂಡರಿ ಮತ್ತು 10 ಸಿಕ್ಸರ್ ಸೇರಿದಂತೆ 103 ರನ್ ಸಿಡಿಸಿ ಟಿ-20ಯಲ್ಲಿ ಚೊಚ್ಚಲ ಶತಕದ ಸಾಧನೆ ಮಾಡಿದರು. ಸೂರ್ಯಕುಮಾರ್ 30 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್ ಸಹಾಯದಿಂದ 63 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 17 ಎಸೆತಗಳಲ್ಲಿ 1 ಬೌಂಡರಿ ಮತ್ತು 4 ಸಿಕ್ಸರ್ ನೊಂದಿಗೆ 42 ರನ್ ಚಚ್ಚಿದರು.



