ಉಪರಾಷ್ಟ್ರಪತಿ ಚುನಾವಣೆಗೆ ಪತ್ರಿಕೋದ್ಯಮ ವಿದ್ಯಾರ್ಥಿಯೊಬ್ಬ ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ.
ಜಗದೀಪ್ ದಂಕರ್ ರಾಜೀನಾಮೆ ಹಿನ್ನೆಲೆಯಲ್ಲಿ ತೆರವಾಗಿರುವ ಉಪರಾಷ್ಟ್ರಪತಿ ಹುದ್ದೆಗೆ ಸೆಪ್ಟೆಂಬರ್ 9 ರಂದು ಚುನಾವಣೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.
ಜೈಪುರದ ಹರಿದೇವ್ ಜೋಶಿ ಪತ್ರಿಕೋದ್ಯಮ ವಿಶ್ವವಿದ್ಯಾಲಯದ ಯುವ ವಿದ್ಯಾರ್ಥಿ ಜಲಾಲುದ್ದೀನ್ ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಮಂಗಳವಾರ ನಾಮಪತ್ರ ಸಲ್ಲಿಸಲು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಬಂದ ಜಲಾಲುದ್ದೀನ್ ಅವರನ್ನು ಕಂಡ ಅನೇಕರು ಆಶ್ಚರ್ಯ ವ್ಯಕ್ತಪಡಿಸಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಜಲಾಲುದ್ದೀನ್ ನಾಮಪತ್ರ ಸಲ್ಲಿಸಲು ಅಗತ್ಯ ಪ್ರಕ್ರಿಯೆಗಳನ್ನು ಪೂರೈಸಿದರು. ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ಒಂದು ಭಾಗವಾದ, 15,000 ರೂ.ಗಳನ್ನು ನಗದು ರೂಪದಲ್ಲಿ ಠೇವಣಿ ಇರಿಸಿದ್ದು, ಅದಕ್ಕಾಗಿ ಈಗಾಗಲೇ ರಶೀದಿ ಪಡೆದಿದ್ದಾರೆ.
ಅಧಿಕೃತವಾಗಿ ನಾಮಪತ್ರ ಅರ್ಹತೆ ಪಡೆಯಬೇಕಾದರೆ ಉಪರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯು ಇತರ ದಾಖಲೆಗಳ ಜೊತೆಗೆ ಮುಂದಿನ ಮೂರು ದಿನಗಳ ಒಳಗೆ ತಮ್ಮ ಅನುಮೋದಕರನ್ನು ಕರೆ ತರಬೇಕು. ಅಲ್ಲದೇ, ನಮೂನೆಯ ಷರತ್ತುಗಳ ಅನುಸರಣೆ ಕಡ್ಡಾಯವಾಗಿದೆ. ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾಲೋಚನೆಯ ನಂತರ, ಮುಂದಿನ ಪ್ರಕ್ರಿಯೆಗಳಿಗಾಗಿ ದೆಹಲಿಗೆ ತೆರಳಬೇಕಾಗುತ್ತದೆ.
ಇದು ನಾಗರಿಕ ಕರ್ತವ್ಯ ಮತ್ತು ಪ್ರಜಾಪ್ರಭುತ್ವದ ಕೇಂದ್ರದೆಡೆಗೆ ಒಂದು ಪಯಣ ಎಂದು ಜೈಸಲ್ಮೇರ್ನ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿರುವ ಜಲಾಲುದ್ದೀನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



