ಕಲಬುರಗಿ: ಮದುವೆ ಆಮಂತ್ರಣ ನೀಡಲು ಹೋಗುತ್ತಿದ್ದವರ ಕಾರು ರಸ್ತೆಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಮೂವರು ಮೃತಪಟ್ಟು ಒಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೇಡಂ ತಾಲ್ಲೂಕಿನ ಮಳಖೇಡ ಪೊಲೀಸ್ ಠಾಣೆ ಸಮೀಪ ಶನಿವಾರ ರಾತ್ರಿ ಸಂಭವಿಸಿದೆ.
ಕಾರು ಚಾಲಕ ಮಹೇಶ್ ಯಾದಗಿರಿ (32), ಪ್ರೇಮ್‌ಕುಮಾರ್ ಮುಧೋಳ್ (25) ಹಾಗೂ ಅನ್ನದಾನಯ್ಯ ಸ್ವಾಮಿ ಬಟಗೇರ (25) ಮೃತಪಟ್ಟವರು, ನಿತ್ಯಾನಂದ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.
ಸಂಬಂಧಿಕರಿಗೆ ಮದುವೆ ಆಮಂತ್ರಣ ನೀಡಲು ಸೇಡಂ ಕಲಬುರಗಿ ಹೆದ್ದಾರಿಯಲ್ಲಿ ರಾತ್ರಿ 9.30ರ ಸಮಯದಲ್ಲಿ ತೆರಳುತ್ತಿದ್ದಾಗ ಎದುರೆಗಡೆಯಿಂದ ಬಂದ ವಾಹನದ ಲೈಟ್ ಚಾಲಕನ ಕಣ್ಣಿಗೆ ಬಡಿದು ಮುಂದೆ ದಾರಿ ಕಾಣದೆ ರಸ್ತೆ ಪಕ್ಕ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಮಳಖೇಡ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ಬಗ್ಗೆ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕೆಲವೇ ದಿನಗಳಲ್ಲಿ ಇವರುಗಳ ಸಂಬಂಧಿಕರೊಬ್ಬರ ಮದುವೆ ಇತ್ತ್ತು. ಅದಕ್ಕಾಗಿ ಇವರುಗಳು ವಿವಿಧ ಗ್ರಾಮಗಳಿಗೆ ತೆರಳಿ ಸಂಬಂಧಿಕರಿಗೆ ಆಮಂತ್ರಣ ನೀಡಲು ಹೋಗುತ್ತಿದ್ದರು. ಘಟನೆಯಿಂದ ಸಂಬಂಧಿಕರು ತೀವ್ರ ಆಘಾತಗೊಂಡಿದ್ದಾರೆ.



