ಯಾದಗಿರಿ: ಕಳೆದ ವರ್ಷ ನಗರದ ಜೈನ್ ಬಡಾವಣೆಯ 26 ವರ್ಷದ ನಿಖಿತಾ ಎಂಬ ಯುವತಿ ಜೈನ ದೀಕ್ಷೆ ಪಡೆದ ಬೆನ್ನಲ್ಲೇ ಜಿಲ್ಲೆಯ ಉದ್ಯಮಿಯೊಬ್ಬರು, 100 ಕೋಟಿ ಆಸ್ತಿ, ಮೂವರು ಹೆಣ್ಣು ಮಕ್ಕಳು ಮತ್ತು ಪತ್ನಿಯನ್ನು ತೊರೆದು ಜೈನ ಸನ್ಯಾಸ ದೀಕ್ಷೆ ಪಡೆದಿದ್ದಾರೆ.
ಯಾದಗಿರಿ ತಾಲೂಕಿನ ಸೈದಾಪುರ ಪಟ್ಟಣದ ನಿವಾಸಿ ದಿಲೀಪ್ ಕುಮಾರ್ ದೋಖಾ ಜೈನ್ ದೀಕ್ಷೆ ಪಡೆದ ಉದ್ಯಮಿ. ಇವರು ನೂರು ಕೋಟಿ ಆಸ್ತಿ, ಲೌಕಿಕ ಸುಖ-ಭೋಗಗಳನ್ನು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ್ದಾರೆ.
ದಿಲೀಪ್ ಕುಮಾರ್ ದೋಖಾ ಅವರು ಕಳೆದ 12 ವರ್ಷಗಳಿಂದ ಅಮೆರಿಕದಲ್ಲಿ ಮೆಡಿಸಿನ್ ಉತ್ಪಾದನಾ ವ್ಯವಹಾರ ಮಾಡುತ್ತಿದ್ದರು. ಬೆಂಗಳೂರಿನಲ್ಲೂ ಆಸ್ತಿ ಹೊಂದಿದ್ದಾರೆ.
ಇವರಿಗೆ ಮದುವೆ ಕೂಡ ಆಗಿದ್ದು, ಪತ್ನಿ, ಮೂವರು ಹೆಣ್ಣು ಮಕ್ಕಳು ಇದ್ದಾರೆ. ಇದೀಗ ಪತ್ನಿಯನ್ನು ಒಬ್ಬಂಟಿಯಾಗಿ ಬಿಟ್ಟು ಜೈನ ಸನ್ಯಾಸಿಯಾಗಿದ್ದಾರೆ.
55 ವರ್ಷದ ದಿಲೀಪ್ ಕುಮಾರ್ ದೋಖಾ ಅವರು 14 ವರ್ಷದ ವಯಸ್ಸಿನಲ್ಲೇ ಜೈನ ದೀಕ್ಷೆ ಪಡೆಯಲು ಹೋಗಿದ್ದರು. ಅದರೆ ಪೋಷಕರು ಬೇಡ ಅಂದಿದ್ದಕ್ಕೆ ಮನಸ್ಸು ಬದಲಿಸಿದ್ದರು. ಆದರೆ ಇದೀಗ ಜೈನ ದೀಕ್ಷೆ ಪಡೆದುಕೊಂಡಿದ್ದಾರೆ.
ಇವರು ಜೈನ ದೀಕ್ಷೆ ಪಡೆದಿದ್ದಕ್ಕೆ ಕುಟುಂಬಸ್ಥರು ಹಾಗೂ ಸಂಬಂಧಿಕರಿಂದ ಕೊನೆಯದಾಗಿ ಅದ್ಧೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಬೀಳ್ಕೊಡುಗೆ ನೀಡಲಾಗಿದೆ. ಸೈದಾಪುರ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಾರೋಟಿದಲ್ಲಿ ಮೆರವಣಿಗೆ ಮಾಡಲಾಗಿದೆ.



