ಕರಾವಳಿ ಸೇರಿದಂತೆ ರಾಜ್ಯದ ನಾನಾ ಕಡೆ ಹೆಚ್ಚುತ್ತಿರುವ ಕೋಮು ಸಂಘರ್ಷ ನಿಯಂತ್ರಿಸಲು ರಾಜ್ಯ ಸರಕಾರ ವಿಶೇಷ ಕಾರ್ಯಪಡೆ ರಚಿಸಿ ಆದೇಶ ಹೊರಡಿಸಿದೆ.
ವಿಶೇಷ ಕಾರ್ಯಪಡೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಲಿದೆ.
ನಕ್ಸಲ್ ನಿಗ್ರಹ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 248 ಸಿಬ್ಬಂದಿಯನ್ನು ವಿಶೇಷ ಕಾರ್ಯಪಡೆಗೆ ನಿಯೋಜಿಸಲಾಗಿದ್ದು, ಈ ಕಾರ್ಯಪಡೆ ಡಿಐಜಿಪಿ ನೇತೃತ್ವ ಹೊಂದಿರುತ್ತಾರೆ.
ವಿಶೇಷ ಕಾರ್ಯಾಪಡೆಯು ಗುಪ್ತಚರ ಮಾಹಿತಿ ಆಧರಿಸಿ ಈ ಮೂರು ಜಿಲ್ಲೆಗಳಲ್ಲಿ ಕೋಮು ಸಂಘರ್ಷ ನಡೆಯದಂತೆ ತಡೆಯಲು ಕ್ರಮ ಕೈಗೊಳ್ಳಲಿದೆ.
ವಿಶೇಷ ಕಾರ್ಯಪಡೆ ರಚನೆ ಬಗ್ಗೆ ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಜಿ.ಪರಮೇಶ್ವರ್ ಜಿಲ್ಲೆಗಳಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಕೋಮು ಸಂಘರ್ಷ ನಿಯಂತ್ರಣಕ್ಕಾಗಿ ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಈ ಕಾರ್ಯಪಡೆ ವಿವಿಧ ಸಮುದಾಯದ ಮುಖಂಡರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಸಭೆಗಳನ್ನು ನಡೆಸಿ ಶಾಂತಿ ಕಾಪಾಡಲು ಶ್ರಮಿಸಲಿದ್ದಾರೆ ಎಂದು ತಿಳಿಸಿದರು.



