ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆಯ ವಿವಸ್ತ್ರ ಪ್ರಕರಣವನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ರಾಜಕೀಯ ತಿರುವು ಪಡೆದ ವಿವಸ್ತ್ರ ಪ್ರಕರಣವನ್ನು ರಾಜ್ಯ ಡಿಜಿಪಿ ಐಜಿ ಶುಕ್ರವಾರ ಸಿಐಡಿಗೆ ವಹಿಸಿ ಆದೇಶ ಹೊರಡಿಸಿದ್ದಾರೆ.
ಬಿಜೆಪಿ ಕಾರ್ಯಕರ್ತೆಯನ್ನು ಬಂಧಿಸುವ ವೇಳೆ ಆಕೆಯೇ ಬಟ್ಟೆ ಬಿಚ್ಚಿಕೊಂಡು ರಂಪಟ ಮಾಡಿ ಪೊಲೀಸರ ಮೇಲೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತೆ ಹನಿಟ್ರ್ಯಾಪ್ ಮಾಡಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೋ ಬಿಡುಗಡೆ ಆಗಿದ್ದು, ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
ಇದೇ ವೇಳೆ ಶುಕ್ರವಾರ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಹುಬ್ಬಳ್ಳಿಯಲ್ಲಿ ನಡೆದ ಮಹಿಳೆ ವಿವಸ್ತ್ರ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದ್ದು, ಮುಖ್ಯಮಂತ್ರಿಗಳ ಅನುಮತಿ ಪಡೆದು ಸಿಐಡಿಗೆ ವಹಿಸಲಾಗುವುದು ಎಂದು ತಿಳಿಸಿದರು.
ಘಟನೆಯ ಸತ್ಯಾಸತ್ಯತೆಯನ್ನು ಸಿಐಡಿಯವರು ತನಿಖೆ ಮಾಡಿ, ಸರ್ಕಾರಕ್ಕೆ ವರದಿ ಕೊಡಬೇಕು. ಆನಂತರ ಸರ್ಕಾರ, ಯಾರು ತಪ್ಪಿತಸ್ಥರು? ಘಟನೆಯಲ್ಲಿ ಯಾರ ನಿರ್ಲಕ್ಷ್ಯ ಇದೆ? ಎಲ್ಲವನ್ನು ಪರಿಗಣಿಸಿ ಮುಂದಿನ ತೀರ್ಮಾನ ಮಾಡಲಿದೆ. ಮಹಿಳೆ ವಿವಸ್ತ್ರ ಆಗುವುದಕ್ಕೆ ಪೊಲೀಸರು ಬಿಟ್ಟಿಲ್ಲ. ಪೊಲೀಸರು ಕೂಡಲೇ ಕ್ರಮ ವಹಿಸಿದ್ದಾರೆ. ಪೊಲೀಸರು ವಿವಸ್ತ್ರಗೊಳಿಸಿಲ್ಲ, ಆಕೆಯೇ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಇನ್ನೂ ಕೂಡ ವಿವರವಾಗಿ ತನಿಖೆ ಮಾಡಬೇಕು ಎಂದು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಸ್ಪಷ್ಟವಾಗಿ ಗೊತ್ತಾಗಬೇಕಾದರೆ ತನಿಖೆಯಾಗಬೇಕು ಎಂದರು.
ಡಿ.ಕೆ.ಶಿವಕುಮಾರ್ ಜವಾಬ್ದಾರಿಯುತ ಸಚಿವರು ಮತ್ತು ಉಪ ಮುಖ್ಯಮಂತ್ರಿಗಳು. ಕುಮಾರಸ್ವಾಮಿ ಹೇಳುವ ಪ್ರಕಾರ ಹೆಚ್ಚಿನ ಅಧಿಕಾರ ಇಲ್ಲ ಎಂಬುದು ಸಂವಿಧಾನಾತ್ಮಕವಾಗಿ ಸರಿ ಇರಬಹುದು. ಆದರೆ, ಸರ್ಕಾರದ ಪ್ರತಿನಿಧಿಯಾಗಿ ಡಿ.ಕೆ.ಶಿವಕುಮಾರ್ ಅಲ್ಲಿಗೆ ಹೋಗಿರುವುದನ್ನು ತಪ್ಪು ಎಂದು ಹೇಳುವುದು ಸರಿಯಲ್ಲ. ಡಿ.ಕೆ.ಶಿವಕುಮಾರ್ ಅವರಿಗೆ ಡೆಪ್ಯೂಟಿ ಚೀಫ್ ಮಿನಿಸ್ಟರ್ ಎಂದು ಪ್ರಮಾಣ ವಚನ ಕೊಟ್ಟಿದ್ದಾರೆ. ನಾನು ಹೋಗುವುದಕ್ಕೆ ಆಗಿಲ್ಲ. ಆ ಜವಾಬ್ದಾರಿಯಿಂದ ಅವರು ಹೋಗಿದ್ದಾರೆ. ನಾನು ಇಲಾಖೆಯ ಸಚಿವ. ಘಟನೆ ನಡೆದ ಕೂಡಲೇ ನಾನು ಹೋಗಿದ್ದರೆ, ಪೊಲೀಸರಿಗೆ ಏನೇನೋ ಸೂಚನೆಗಳನ್ನು ಕೊಟ್ಟಿದ್ದಾರೆ, ಅವರ ಪರವಾಗಿ ಸೂಚನೆ ನೀಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತವೆ. ನಾವು ಭೇಟಿ ನೀಡುವಾಗ ಯೋಚನೆ ಮಾಡಿ, ತನಿಖೆಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಕಾರಣದಿಂದ ವಿಳಂಬ ಮಾಡುತ್ತೇವೆ. ಅದೇ ಕಾರಣದಿಂದ ಇದುವರೆಗೂ ಬಳ್ಳಾರಿಗೆ ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಉಪಮುಖ್ಯಮಂತ್ರಿಯಾಗಿ, ಸಚಿವರಾಗಿ, ಸರ್ಕಾರದ ಪ್ರತಿನಿಧಿಯಾಗಿ ಡಿ.ಕೆ.ಶಿವಕುಮಾರ್ ಅವರು ಹೋಗಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಮೃತ ಕುಟುಂಬಸ್ಥರನ್ನು ಭೇಟಿ ಮಾಡಿ, ಸಾಂತ್ವಾನ ಹೇಳಿದ್ದಾರೆ. ಇದು ತಪ್ಪು ಎನ್ನುವುದಾದರೆ ಏನು ಹೇಳಬೇಕು. ಸರ್ಕಾರದ ಪ್ರತಿನಿಧಿಯಾಗಿ ಭೇಟಿ ನೀಡಲು ಯಾರ ಅನುಮತಿ ಬೇಕು. ನಿಜವಾದ ಹಸ್ತಕ್ಷೇಪ ಮಾಡಿ, ಪೊಲೀಸ್ ಅಧಿಕಾರಿಗಳಿಗೆ ಸೂಚನೆಗಳನ್ನು ಕೊಟ್ಟು, ಅದರ ತೀರ್ಮಾನದ ಮೇಲೆ ಬೇರೆ ರೀತಿಯ ಪರಿಣಾಮಗಳಾಗಿದ್ದರೆ ಕುಮಾರಸ್ವಾಮಿಯವರ ಹೇಳಿಕೆಯನ್ನು ಒಪ್ಪೋಣ. ಆದರೆ, ಜವಾಬ್ದಾರಿಯುತ ಸರ್ಕಾರದ ಪ್ರತಿನಿಧಿ ಭೇಟಿ ನೀಡಿರುವುದನ್ನು ಬೇರೆ ರೀತಿಯಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿದರು.
ಇದುವರೆಗೂ ನಮ್ಮ ತೀರ್ಮಾನಗಳಲ್ಲಿ ಯಾರು ಕೂಡ ಇಲ್ಲಿವರೆಗೆ ಹಸ್ತಕ್ಷೇಪ ಮಾಡಿಲ್ಲ. ಮುಖ್ಯಮಂತ್ರಿಗಳು ಮತ್ತು ನಾನು ಒಟ್ಟಾಗಿ ಚರ್ಚಿಸಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ. ಹುಬ್ಬಳ್ಳಿ ಪ್ರಕರಣವನ್ನು ಸಿಐಡಿಗೆ ವಹಿಸುತ್ತೇನೆ ಎಂದು ನಾನು ನೇರವಾಗಿ ಹೇಳಬಹುದಿತ್ತು. ಆದರೆ, ಸಿಎಂ ಗಮನಕ್ಕೆ ತರದೇ ಇಂತಹ ತೀರ್ಮಾನಗಳನ್ನು ಮಾಡಲಾಗುತ್ತದೆಯೇ? ಎಂದರು



