ಕೊಳಗೇರಿ ನಿವಾಸಿಗಳಿಗೆ ನಿರ್ಮಿಸಲಾದ ಬಹುಮಹಡಿ ಕಟ್ಟಡಗಳಲ್ಲಿ ಅಕ್ರಮವಾಗಿ ನೆಲೆಸಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಕೊಳಗೇರಿ ಅಭಿವೃದ್ದಿ ಮಂಡಳಿಯಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿವಿಧ ದಲಿತ ಸಂಘಟನೆಗಳು ಹಾಗೂ ಕೊಳಗೇರಿ ನಿವಾಸಿಗಳ ಮನವಿ ಸ್ವೀಕರಿಸಿದ ನಂತರ ಅವರು ಮಾತನಾಡಿದರು.
ರಾಜ್ಯದಲ್ಲಿ 2800ಕ್ಕೂ ಹೆಚ್ಚು ಸ್ಲಂ ಪ್ರದೇಶವಿದೆ ಬೆಂಗಳೂರು ನಗರದಲ್ಲಿ 450ಕ್ಕೂ ಸ್ಲಂ ಪ್ರದೇಶವಿದೆ. ರಾಜ್ಯದಲ್ಲಿರುವ ಸ್ಲಂ ನಿವಾಸಿಗಳಿಗೆ 6 ತಿಂಗಳ ಒಳಗೆ ಹಕ್ಕುಪತ್ರ ನೀಡಲಾಗುವುದು. ನಿಮ್ಯಾನ್ಸ್ ಒಳಗಿನ ಪ್ರದೇಶ ಕೊಳಗೇರಿ ಅಭಿವೃದ್ದಿ ಮಂಡಳಿಗೆ ನೀಡಿದರೆ ಹಕ್ಕುಪತ್ರ ನೀಡಲಾಗುವುದು ಎಂದು ಅವರು ಹೇಳಿದರು.
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಸ್ಲಂ ಪ್ರದೇಶವನ್ನು ಕೊಳಗೇರಿ ಪ್ರದೇಶ ಎಂದು ನಿರ್ಧಾರ ಮಾಡಿ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಕೊಳಗೇರಿ ಅಭಿವೃದ್ದಿ ಮಂಡಳಿ ನಿವೃತ್ತರಾದ ಬಾಲರಾಜ್ ರವರನ್ನು ಮುಖ್ಯ ತಾಂತ್ರಿಕ ಸಲಹೆಗಾರರಾಗಿ ನೇಮಿಸಲಾಗಿದೆ. ಮುಂದಿನ ತಿಂಗಳು ಕೊಳಗೇರಿ ನಿವಾಸಿಗಳಿಗೆ ಸಾವಿರಾರು ಮನೆಗಳನ್ನು ನೀಡಲಾಗುವುದು ಎಂದು ಅವರು ನುಡಿದರು.
ಕಪ್ಪು ಪಟ್ಟಿಯಲ್ಲಿ ಗುತ್ತಿಗೆದಾರರಿಗೆ ಯಾವುದೇ ಗುತ್ತಿಗೆ ಕೆಲಸ ನೀಡುವುದಿಲ್ಲ. ಸ್ಲಂ ಪ್ರದೇಶದ ಜಾಗದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಬಹುಮಹಡಿ ಕಟ್ಟಡ ಕಟ್ಟಿ ನಿವಾಸಿಗಳಿಗೆ ನೀಡುವ ಯೋಜನೆ ಕುರಿತು ಸರ್ಕಾರ ಚಿಂತನೆ ಮಾಡುತ್ತಿದೆ ಎಂದು ಅವರು ವಿವರಿಸಿದರು.
ಸಾದರಮಂಗಲ ಒಂದು ಎಕರೆ ಪ್ರದೇಶ ಖಾಸಗಿಯವರು ಒತ್ತುವರಿ ಮಾಡಿದ್ದಾರೆ ಎಂಬ ದೂರು ಬಂದಿದೆ, ಒಂದು ವಾರದಲ್ಲಿ ಸರ್ವೇ ಮಾಡಿ, ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅರ್ಹ ಫಲಾನುಭವಿಗಳಿಗೆ ಮನೆ ನೀಡಲಾಗುವುದು. ಸ್ಲಂ ಬಹುಮಹಡಿ ಕಟ್ಟಡದಲ್ಲಿ ಅನಧಿಕೃತವಾಗಿ ವಾಸಿಸುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಜಮೀರ್ ಅಹ್ಮದ್ ಎಚ್ಚರಿಸಿದರು.
ಸ್ಲಂ ಜನರ ಜೀವನ ಹೇಗೆ ಎಂಬುದು ನಾನು ಕಣ್ಣಾರೆ ನೋಡಿದ್ದೇನೆ, ನನ್ನ ಅಧಿಕಾರದ ಅವಧಿಯಲ್ಲಿ ಅವರ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತೇನೆ. ಕೊಳಗೇರಿ ಅಭಿವೃದ್ದಿಗೆ ಸರ್ಕಾರ 50ಕೋಟಿ ಕೊಡುತ್ತಿದೆ ಸ್ಲಂ ಪ್ರದೇಶಗಳ ಅಭಿವೃದ್ದಿ ಪಡಿಸಲು ಕಷ್ಟ ಅದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ 500ಕೋಟಿ ಅನುದಾನ ನೀಡಿ ಎಂದು ಮನವಿ ಸಲ್ಲಿಸಲಾಗಿದೆ ಹಾಗೂ ಕೇಂದ್ರ ಸರ್ಕಾರಕ್ಕೆ 3600ಕೋಟಿ ರೂಪಾಯಿ ಅನುದಾನ ಕೊಡಿ ಎಂದು ಮನವಿ ಮಾಡಲಾಗಿದೆ ಎಂದು ಹೇಳಿದರು.