Friday, December 12, 2025
Google search engine
Homeರಾಜ್ಯ84 ವರ್ಷಗಳಲ್ಲಿ ಮೊದಲ ಬಾರಿ ಜೂನ್ ನಲ್ಲಿ ಕೆಆರ್ ಎಸ್ ನಿಂದ ಕಾವೇರಿ ನೀರು ಬಿಡುಗಡೆ!

84 ವರ್ಷಗಳಲ್ಲಿ ಮೊದಲ ಬಾರಿ ಜೂನ್ ನಲ್ಲಿ ಕೆಆರ್ ಎಸ್ ನಿಂದ ಕಾವೇರಿ ನೀರು ಬಿಡುಗಡೆ!

ಮೈಸೂರು: ಅವಧಿಗೂ ಮುನ್ನವೇ ಮುಂಗಾರು ಮಳೆಯ ಅಬ್ಬರದ ಕಾರಣ 84 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ಕೆಆರ್ ಎಸ್ ಜಲಾಶಯದಿಂದ ನೀರು ಹೊರಗೆ ಬಿಡಲಾಗುತ್ತಿದೆ.

ಕೆಆರ್ ಎಸ್ ಜಲಾಶಯವನ್ನು 1911ರಲ್ಲಿ ನಿರ್ಮಿಸಲು ಆರಂಭಿಸಲಾಗಿದ್ದು, 1932ರಲ್ಲಿ ಪೂರ್ಣಗೊಂಡಿತು. ಪೂರ್ಣಗೊಂಡ 9 ವರ್ಷಗಳ ನಂತರ ಅಂದರೆ 1941ರಲ್ಲಿ ಮೊದಲ ಬಾರಿ ಜೂನ್ ತಿಂಗಳಲ್ಲಿ ಕಾವೇರಿ ನೀರನ್ನು ಹೊರಗೆ ಬಿಡಲಾಗುತ್ತಿದೆ.

ಕೆಆರ್ ಎಸ್ ಆಣೆಕಟ್ಟು ಗರಿಷ್ಠ 124.80 ಅಡಿ ಎತ್ತರ ಹೊಂದಿದ್ದು, 121 ಅಡಿ ನೀರು ಸಂಗ್ರಹವಾಗಿದೆ. ಅಪಾಯ ಮಟ್ಟ ತಲುಪಿದ ನಂತರ ಜಲಾಶಯದಿಂದ ನೀರು ಹೊರಗೆ ಬಿಡಲಾಗುತ್ತದೆ. ಈ ಬಾರಿ ಕಾವೇರಿ ಜಲನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, 35 ವರ್ಷಗಳ ನಂತರ ಜೂನ್ ನಲ್ಲಿ 100 ಅಡಿಗಿಂತ ಹೆಚ್ಚು ಸಂಗ್ರಹವಾಗಿದೆ.

ಕೆಆರ್ ಎಸ್ ಡ್ಯಾಂ ಬಹುತೇಕ ಭರ್ತಿಯಾಗಿದ್ದು, ಪೂರ್ಣ ಭರ್ತಿಯಾಗಲು ಕ್ಷಣಗಣನೆ ಆರಂಭವಾಗಿದೆ.  ಈ ಹಿನ್ನೆಲೆಯಲ್ಲಿ ಜಲಾಶಯದಿಂದ 29,000 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗುತ್ತಿದೆ. 21,315 ಕ್ಯೂಸೆಕ್ಸ್ ಒಳಹರಿವು ಇದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನೀರು ಹೊರಗೆ ಬಿಡಲಾಗುತ್ತಿದೆ.

ಇನ್ನೆರಡು ದಿನದಲ್ಲಿ ಡ್ಯಾಂ ಭರ್ತಿಯಾಗುವ ಸಾಧ್ಯತೆ ಇದೆ. ಸಂಜೆ ಅಥವಾ ನಾಳೆ ಬೆಳಿಗ್ಗೆಯೊಳಗೆ ಹೆಚ್ಚುವರಿ 50 ಸಾವಿರ ಕ್ಯೂಸೆಕ್ಸ್ ನೀರು ಸಂಗ್ರಹವಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಹೊರಹರಿವಿನ ಪ್ರಮಾಣ ಹೆಚ್ಚಿಸುವ ಸಾಧ್ಯತೆ ಇದ್ದು, ಮಂಡ್ಯ, ಶ್ರೀರಂಗಪಟ್ಟಣ ಸೇರಿದಂತೆ ಅಣೆಕಟ್ಟಿನ ಅಚ್ಚುಕಟ್ಟು ಪ್ರದೇಶದಲ್ಲಿ ಜನರು ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚಿಸಲಾಗಿದೆ.

ಪ್ರವಾಸಿ ತಾಣಗಳಿಗೂ ನಿಷೇಧ

ಬಲಮುರಿ, ಎಡಮುರಿ, ಸಂಗಮ, ಗೋಸಾಯಿ ಘಾಟ್‌ನಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ನಿಮಿಷಾಂಭ, ಶ್ರೀಗಂಗನಾಥ ದೇವಾಲಯದ ಸ್ನಾನಘಟ್ಟ ಸೇರಿ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ನಿಷೇಧ ಹೇರಲಾಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಕೆಆರ್‌ಎಸ್‌ ಜಲಾಶಯದ ಒಳ ಹರಿವಿನ ಪ್ರಮಾಣವೂ ಹೆಚ್ಚಾಗಿದೆ. ಹೀಗಾಗಿ, ಅಣೆಕಟ್ಟೆಯಿಂದ ಪ್ರಸ್ತುತ 17 ಸಾವಿರ ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗಿದೆ. ಈ ಪ್ರಮಾಣವು ಯಾವುದೇ ಸಂದರ್ಭದಲ್ಲೂ 30,000 ಕ್ಯೂಸೆಕ್‌ಗೆ ಹೆಚ್ಚಾಗಬಹುದು. ಇದರಿಂದ ಕಾವೇರಿ ನದಿ ಪಾತ್ರದ ತಗ್ಗು ಪ್ರದೇಶಗಳು ಮತ್ತು ನದಿಯ ಎರಡೂ ದಂಡೆಗಳಲ್ಲಿರುವ ಜನರು ಎಚ್ಚರ ವಹಿಸಬೇಕು. ತಮ್ಮ ಆಸ್ತಿಪಾಸ್ತಿ, ಜಾನುವಾರುಗಳ ರಕ್ಷಣೆಗೆ ಕ್ರಮ ವಹಿಸಬೇಕು ಎಂದು ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್‌ ಕೆ.ರಘುರಾಮ್‌ ಮುನ್ನೆಚ್ಚರಿಕೆ ನೀಡಿದ್ದಾರೆ.

ಅಗ್ನಿಶಾಮಕ, ಸೆಸ್ಕ್‌, ಅರಣ್ಯ, ತಹಸೀಲ್ದಾರ್‌, ನಗರ ಸ್ಥಳೀಯ ಸಂಸ್ಥೆಗಳು 24*7 ಕಾರ್ಯ ನಿರ್ವಹಿಸುವ ಕಂಟ್ರೋಲ್‌ ರೂಂ ಸ್ಥಾಪಿಸಬೇಕು. ಸಾರ್ವಜನಿಕರು ಸಂಪರ್ಕಿಸಬೇಕಿರುವ ದೂರವಾಣಿ ಸಂಖ್ಯೆಯ ಮಾಹಿತಿ ನೀಡಬೇಕು. ಅಗ್ನಿಶಾಮಕ ಇಲಾಖೆಯು ಅತಿವೃಷ್ಟಿ ಸಂದರ್ಭದಲ್ಲಿ ಬೇಕಿರುವ ಬೋಟ್‌, ಲೈಫ್‌ ಜಾಕೆಟ್‌ ಸೇರಿದಂತೆ ಇನ್ನಿತರೆ ಪರಿಕರಗಳು ಸುಸ್ಥಿತಿಯಲ್ಲಿರುವ ಬಗ್ಗೆ ಪರಿಶೀಲಿಸಿಕೊಳ್ಳಿ. ಸ್ಥಳೀಯವಾಗಿ ನುರಿತ ಈಜುಗಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಜಿಲ್ಲೆಯಲ್ಲಿ 67 ಗ್ರಾಮಗಳನ್ನು ನೆರೆಗೆ ಸಿಲುಕಬಹುದಾದ ಗ್ರಾಮಗಳು ಎಂದು ಈಗಾಗಲೇ ಗುರುತಿಸಲಾಗಿದೆ. ಈ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಬೇಕು. ತಹಸೀಲ್ದಾರ್‌ಗಳು ಗ್ರಾ.ಪಂ. ಮಟ್ಟದಲ್ಲಿ ಸಭೆ ನಡೆಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಅವಶ್ಯಕವಾದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಬೇಕಿದ್ದು, ಮೂಲ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಡಿಸಿ ಸೂಚನೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments