ಹನಿಟ್ರ್ಯಾಪ್ ಪ್ರಕರಣದ ತನಿಖೆಯನ್ನು ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ನಡೆಸಬೇಕು ಎಂದು ಆಗ್ರಹಿಸಬೇಕೆಂದು ಆಗ್ರಹಿಸಿ ವಿಪಕ್ಷ ಸದಸ್ಯರು ಸ್ಪೀಕರ್ ಖಾದರ್ ಮೇಲೆ ಪೇಪರ್ ಎಸೆದ ಘಟನೆ ವಿಧಾನಸಭೆ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ನಡೆದಿದೆ.
ಶುಕ್ರವಾರ ಬೆಳಗ್ಗೆ ವಿಧಾನಸಭೆ ಆರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮತ್ತು ಸುನಿಲ್ ಕುಮಾರ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಪ್ರತಿಭಟನೆ ನಡುವೆಯೂ ಸಿಎಂ ಸಿದ್ದರಾಮಯ್ಯ ಬಜೆಟ್ ಮೇಲಿನ ಭಾಷಣ ಮುಂದುವರಿಸಿದ್ದರಿಂದ ಪ್ರತಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಸಚಿವರೇ ತನ್ನ ಮೇಲೆ ಹನಿಟ್ರ್ಯಾಪ್ ನಡೆದಿದೆ ಎಂದು ಆರೋಪಿಸಿದ್ದಾರೆ. ಆದರೆ ಸರ್ಕಾರ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಜಡ್ಜ್ಗಳ ಮೇಲೆ ಹನಿಟ್ರ್ಯಾಪ್ ನಡೆದಿದೆ ಎಂದು ರಾಜಣ್ಣ ಹೇಳಿದ್ದಾರೆ. ಹೀಗಾಗಿ ಸರ್ಕಾರ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ವಿಪಕ್ಷಗಳ ಆಗ್ರಹಕ್ಕೆ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಅವರು ಈ ಪ್ರಕರಣವನ್ನುಗಂಭೀರವಾಗಿ ಸ್ವೀಕರಿಸಿ ಉನ್ನತ ಮಟ್ಟದ ತನಿಖೆ ನಡೆಸುತ್ತೇವೆ ಎಂದು ತಿಳಿಸಿದರು. ನಂತರ ಸಿದ್ದರಾಮಯ್ಯ ನವರು ಬಜೆಟ್ ಭಾಷಣಕ್ಕೆ ಉತ್ತರ ನೀಡಲು ಆರಂಭಿಸಿರು. ಈ ವೇಳೆ ವಿಪಕ್ಷ ಸದಸ್ಯರು ಬಾವಿಗೆ ಇಳಿದು ಪ್ರತಿಭಟಿಸಿದರು.
ಸಿಎಂ ಭಾಷಣದ ಬಳಿಕ ಸರ್ಕಾರ ಹಲವು ಮಸೂದೆಗಳಿಗೆ ಅಂಗೀಕಾರವನ್ನು ಪಡೆದುಕೊಂಡಿತು. ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಮಸೂದೆಗಳ ಪ್ರತಿಯನ್ನು ಸ್ಪೀಕರ್ ಮೇಲೆ ಎಸೆದು ಸಿಟ್ಟು ಪ್ರದರ್ಶಿಸಿದರು. ಗದ್ದಲ ಜಾಸ್ತಿ ಆಗುತ್ತಿದ್ದಂತೆ ಖಾದರ್ ಕಲಾಪವನ್ನು ಮುಂದಕ್ಕೆ ಹಾಕಿದರು.