ಮಧ್ಯಮ ವೇಗಿಗಳ ಮಾರಕ ದಾಳಿ ಹಾಗೂ ಕೆಎಲ್ ರಾಹುಲ್ ಅವರ ತಾಳ್ಮೆಯ ಅರ್ಧಶತಕದ ಸಹಾಯದಿಂದ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ವೆಸ್ಟ್ ಇಂಡೀಸ್ ವಿರುದ್ಧ ಬಿಗಿ ಹಿಡಿತ ಸಾಧಿಸಿದೆ.
ಅಹಮದಾಬಾದ್ ನಲ್ಲಿ ಗುರುವಾರ ಆರಂಭಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ವೆಸ್ಟ್ ಇಂಡೀಸ್ ತಂಡ ಚಹಾ ವಿರಾಮಕ್ಕೂ ಮುನ್ನವೇ ಮೊದಲ ಇನಿಂಗ್ಸ್ ನಲ್ಲಿ 162 ರನ್ ಗೆ ಗಂಟುಮೂಟೆ ಕಟ್ಟಿತು.
ನಂತರ ಆಡಲು ಇಳಿದ ಭಾರತ ತಂಡ ಮಳೆಯ ಅಡ್ಡಿ ನಡುವೆ ದಿನದಾಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 121 ರನ್ ಗಳಿಸಿದೆ. ಭಾರತ ಮುನ್ನಡೆ ಸಾಧಿಸಲು 41 ರನ್ ಅಗತ್ಯವಿದ್ದು, 8 ವಿಕೆಟ್ ಕೈಯಲ್ಲಿ ಉಳಿಸಿಕೊಂಡಿದೆ.
ಭಾರತ ತಂಡ ಎಚ್ಚರಿಕೆಯಿಂದ ಆಟ ಆರಂಭಿಸಿತು. ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಮೊದಲ ವಿಕೆಟ್ ಗೆ 68 ರನ್ ಪೇರಿಸಿ ಉತ್ತಮ ಆರಂಭ ನೀಡಿದರು. ಜೈಸ್ವಾಲ್ 54 ಎಸೆತಗಳಲ್ಲಿ 7 ಬೌಂಡರಿ ಒಳಗೊಂಡ 36 ರನ್ ಬಾರಿಸಿ ಔಟಾದರೆ, ರಾಹುಲ್ 114 ಎಸೆತಗಳಲ್ಲಿ 6 ಬೌಂಡರಿ ಸಹಾಯದಿಂದ 53 ರನ್ ಬಾರಿಸಿ ಔಟಾಗದೇ ಉಳಿದರು.
ಸಾಯಿ ಸುದರ್ಶನ್ (7) ಮತ್ತೊಮ್ಮೆ ವಿಫಲರಾದರೆ, ನಾಯಕ ಶುಭಮನ್ ಗಿಲ್ 18 ರನ್ ಬಾರಿಸಿ ಔಟಾಗದೇ ಉಳಿದಿದ್ದಾರೆ.
ಕುಸಿದ ವೆಸ್ಟ್ ಇಂಡೀಸ್
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡದ ಯಾವೊಬ್ಬ ಆಟಗಾರ ಭಾರತ ತಂಡದ ದಾಳಿಗೆ ಗಟ್ಟಿಯಾಗಿ ನೆಲೆ ನಿಲ್ಲಲಿಲ್ಲ. ತಂಡ ನಿಯಮಿತವಾಗಿ ವಿಕೆಟ್ ಕಳೆದುಕೊಂಡು ಕಳಪೆ ಮೊತ್ತಕ್ಕೆ ಪತನಗೊಂಡಿತು.
ವೆಸ್ಟ್ ಇಂಡೀಸ್ ಒಂದು ಹಂತದಲ್ಲಿ 42 ರನ್ ಗೆ 4 ವಿಕೆಟ್ ಕಳೆದುಕೊಂಡು 100ರ ಗಡಿ ದಾಟುವುದು ಕೂಡ ಕಷ್ಟ ಎಂಬ ಪರಿಸ್ಥಿತಿಗೆ ಸಿಲುಕಿತ್ತು. ಈ ಹಂತದಲ್ಲಿ ಜಸ್ಟಿನ್ ಗ್ರೀವ್ಸ್ (32 ರನ್, 48 ಎಸೆತ, 4 ಬೌಂಡರಿ) ಮತ್ತು ಶಾಯಿ ಹೋಪ್ (26 ರನ್, 36 ಎಸೆತ, 3 ಬೌಂಡರಿ) 5ನೇ ವಿಕೆಟ್ ಗೆ 48 ರನ್ ಜೊತೆಯಾಟವಾಡಿ ತಂಡದ ಮೊತ್ತವನ್ನು 100ರ ಗಡಿ ಸಮೀಪ ತಂದು ನಿಲ್ಲಿಸಿದರು.
ಏಷ್ಯಾಕಪ್ ನಲ್ಲಿ 17 ವಿಕೆಟ್ ಪಡೆದು ಮಿಂಚಿದ್ದ ಸ್ಪಿನ್ನರ್ ಕುಲದೀಪ್ ಯಾದವ್ ಈ ಜೋಡಿಯನ್ನು ಬೇರ್ಪಡಿಸಿದ್ದೂ ಅಲ್ಲದೇ 2 ವಿಕೆಟ್ ಪಡೆದು ಗಮನ ಸೆಳೆದರು. ಮೊಹಮದ್ ಸಿರಾಜ್ 4 ವಿಕೆಟ್ ಪಡೆದು ಮಿಂಚಿದರೆ, ಜಸ್ ಪ್ರೀತ್ ಬುಮ್ರಾ 3 ವಿಕೆಟ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ 44.1 ಓವರ್ ಗಳಲ್ಲಿ162 (ಜಸ್ಟಿನ್ ಗ್ರೇವಿಸ್ 32, ಶಾಯಿ ಹೋಪ್ 26, ರೊಸ್ಟನ್ 24, ಸಿರಾಜ್ 40/3, ಬುಮ್ರಾ 42/3, ಕುಲದೀಪ್ 25/2).
ಭಾರತ ಮೊದಲ ಇನಿಂಗ್ಸ್ 38 ಓವರ್ ಗಳಲ್ಲಿ 2 ವಿಕೆಟ್ ಗೆ 121 (ರಾಹುಲ್ ಅಜೇಯ 53, ಜೈಸ್ವಾಲ್ 36, ಗಿಲ್ ಅಜೇಯ 18, ರೊಸ್ಟನ್ 16/1).



