ನೌಕಾಪಡೆಯ ಸ್ಪೀಡ್ ಬೋಟ್ ಪ್ರಯಾಣಿಕರ ದೋಣಿಗೆ ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ಮೃತಪಟ್ಟ ದಾರುಣ ಘಟನೆ ಮುಂಬೈನಲ್ಲಿ ಸಂಭವಿಸಿದೆ.
ಮುಂಬೈ ಕಡಲ ತೀರದಲ್ಲಿ ಬುಧವಾರ ಸ್ಪೀಡ್ ಬೋಟ್ ಇಂಜಿನ್ ಪರೀಕ್ಷೆ ವೇಳೆ ನಿಯಂತ್ರಣ ತಪ್ಪಿ ದೋಣಿಗೆ ಡಿಕ್ಕಿ ಹೊಡೆದಿದೆ. ದೋಣಿಯಲ್ಲಿ 110ಕ್ಕೂ ಹೆಚ್ಚು ಜನರು ಇದ್ದರು ಎಂದು ತಿಳಿದು ಬಂದಿದೆ.
ನೌಕಾಪಡೆಯ ಸ್ಪೀಡ್ ಬೋಟ್ ನಲ್ಲಿ ನಾಲ್ವರು ಸಿಬ್ಬಂದಿಗಳಿದ್ದು, ಸ್ಪೀಡ್ ಬೋಟ್ ನಿಯಂತ್ರಣ ತಪ್ಪಿ ದೋಣಿಗೆ ಡಿಕ್ಕಿ ಹೊಡೆದಿದೆ. 77 ಮಂದಿಯನ್ನು ಕೂಡಲೇ ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.
ಎಲ್ಫಾಂಟಾ ದ್ವೀಪದಿಂದ ಗೇಟ್ ವೇ ನಡುವೆ ಸ್ಪೀಡ್ ಬೋಟ್ ಇಂಜಿನ್ ತಪಾಸಣೆಗಾಗಿ ವೇಗವಾಗಿ ಓಡಿಸಲಾಗುತ್ತಿತ್ತು. ಸ್ಪೀಡ್ ಬೋಟ್ ಡಿಕ್ಕಿ ಹೊಡೆಯುತ್ತಿರುವ ವೀಡಿಯೋವನ್ನು ದೋಣಿಯಲ್ಲಿದ್ದ ಪ್ರಯಾಣಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಇದೀಗ ವೈರಲ್ ಆಗಿದೆ.
ದುರ್ಘಟನೆ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಘಾತ ವ್ಯಕ್ತಪಡಿಸಿದ್ದು, ಅಮೂಲ್ಯವಾದ ಜೀವಗಳು ನಷ್ಟವಾಗಿದ್ದಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.