ಬಾತ್ ರೂಮ್ ಗೆ ಹೋಗಿ ಬರ್ತಿನಿ ಅಂತ ಹೋದ ವಧು ನಗದು ಹಾಗೂ ಚಿನ್ನಾಭರಣದೊಂದಿಗೆ ದೇವಸ್ಥಾನದ ಮದುವೆ ಮಂಪಟದಿಂದಲೇ ಪರಾರಿಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಪತ್ನಿ ನಿಧನರಾಗಿದ್ದರಿಂದ ಎರಡನೇ ಮದುವೆಗೆ ಸಿದ್ಧನಾಗಿದ್ದ ಸಿತಾಪುರ್ ಜಿಲ್ಲೆಯ ಗೋವಿಂದಪುರ ಗ್ರಾಮದ 40 ವರ್ಷದ ವರ ಕಮಲೇಶ್ ಮದುವೆಗೆ ಸಾಕಷ್ಟು ಖರ್ಚು ಮಾಡಿ ಈಗ ಕಂಗಲಾಗಿದ್ದಾನೆ.
ಮಹಿಳಾ ಬ್ರೋಕರ್ ಗೆ 30 ಸಾವಿರ ರೂ. ನೀಡಿ ಹೆಣ್ಣು ಗೊತ್ತು ಮಾಡಿದ್ದರು. ಮದುವೆ ದಿನ ಅಲಂಕಾರ ಮಾಡಿಕೊಂಡು ಬಂದ ಮಹಿಳೆಗೆ ಕಮಲೇಶ್ ಮೇಕಪ್ ಸೆಟ್, ಚಿನ್ನಾಭರಣ ಹಾಗೂ ಸಿದ್ಧತೆ ಮಾಡಿಕೊಳ್ಳಲು ಸಾಕಷ್ಟು ಹಣ ನೀಡಿದ್ದರು.
ಬರೋಹಿಯಾ ಜಿಲ್ಲೆಯ ಶಿವನ ದೇವಸ್ಥಾನದಲ್ಲಿ ಮದುವೆ ಸಿದ್ಧತೆಗಳು ಪೂರ್ಣಗೊಂಡು ಕಾರ್ಯಕ್ರಮಗಳು ಆರಂಭವಾಗುತ್ತಿದ್ದಂತೆ ವಧು ಬಾತ್ ರೂಮ್ ಗೆ ಹೋಗಿ ಬರ್ತಿನಿ ಎಂದು ಹೇಳಿ ಕಾಲ್ಕಿತ್ತಿದ್ದಾಳೆ.
ನಾನು ನನ್ನ ಕುಟುಂಬವನ್ನು ಮರು ನಿರ್ಮಿಸಲು ಬಯಸಿ ಮದುವೆಗೆ ಸಿದ್ಧನಾಗಿದ್ದೆ. ಆದರೆ ಕುಟುಂಬದ ಜೊತೆ ಎಲ್ಲವನ್ನೂ ಕಳೆದುಕೊಂಡೆ ಎಂದು ಕಮಲೇಶ್ ಅಲವತ್ತುಗೊಂಡಿದ್ದು, ಪೊಲೀಸರಿಗೆ ದೂರು ನೀಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಹಿಳೆ ಹಾಗೂ ಆಕೆಯ ತಾಯಿಯಂತೆ ನಟಿಸಿದ ಬ್ರೋಕರ್ ಮೇಲೂ ಪೊಲೀಸರು ನಿಗಾ ವಹಿಸಿದ್ದಾರೆ.