Kannadavahini

ಬಾರಿಸು ಕನ್ನಡ ಡಿಂಡಿಮವ

kodimatha swamiji
ಜಿಲ್ಲಾ ಸುದ್ದಿ ಜ್ಯೋತಿಷ್ಯ ತಾಜಾ ಸುದ್ದಿ

6 ತಿಂಗಳಲ್ಲಿ ರಾಜ್ಯ ಸರ್ಕಾರ ಪತನವಾಗುತ್ತಾ? ಕೋಡಿಮಠ ಸ್ವಾಮೀಜಿ ಭವಿಷ್ಯ

ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಯಾವುದೇ ಆಪತ್ತು ಇಲ್ಲ ಎಂದು ಕೋಡಿಮಠದ ಶ್ರೀಗಳಾದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ನಂತರದ 6 ತಿಂಗಳಲ್ಲೇ ರಾಜ್ಯ ಸರ್ಕಾರ ಪತನಗೊಳ್ಳುತ್ತದೆ ಎಂಬ ವರದಿಗಳ ಬಗ್ಗೆ ಈ ರೀತಿ ಪ್ರತಿಕ್ರಿಯಿಸಿದರು.

ಇದೇ ವೇಳೆ ಕೇಂದ್ರದಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದಿಲ್ಲ. ಎನ್ ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದಿದ್ದು, ಹೆಚ್ಚು ದಿನ ಸರ್ಕಾರ ಉಳಿಯುವುದಿಲ್ಲ ಎಂಬ ಪ್ರತಿಪಕ್ಷಗಳ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಕೋಡಿಮಠ ಸ್ವಾಮೀಜಿಗಳು, ಶ್ರಾವಣದ ನಂತರ ಈ ಬಗ್ಗೆ ಮಾತನಾಡುವೆ ಎಂದಿದ್ದಾರೆ.

ಈಗ ದೇಶದಲ್ಲಿ ಕ್ರೋಧಿ ನಾಮ ಸಂವತ್ಸರ ಇದೆ. ಶುಭಗಳಿಗಿಂತ ಅಶುಭಗಳೇ ಹೆಚ್ಚಾಗಿ ನಡೆಯುತ್ತವೆ. ದೇಶದಲ್ಲಿ ಜಲಕಂಟಕ, ಅಗ್ನಿಕಂಟಕ, ವಾಯು ಕಂಟಕಗಳು ಹೆಚ್ಚಾಗಲಿವೆ. ರಾಜ್ಯದಲ್ಲಿ ಈ ಬಾರಿ ಭಾರೀ ಮಳೆಯಾಗಿ ಅತಿವೃಷ್ಟಿ ಸಾಧ್ಯತೆ ಇದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಗುರುಗಳು ಶಿಷ್ಯರಾಗುತ್ತಾರೆ, ಶಿಷ್ಯರು ಗುರುಗಳಾಗುತ್ತಾರೆ. ಹೆಣ್ಣು ಮಕ್ಕಳ ಪ್ರಾಬಲ್ಯ ಹೆಚ್ಚಾಗಲಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಯಾವುದೇ ಆಪತ್ತು ಇರುವುದಿಲ್ಲ. ಶ್ರಾವಣದಲ್ಲಿ ನಾನು ಮತ್ತೊಂದು ಸ್ಫೋಟಕ ಭವಿಷ್ಯ ಹೇಳುತ್ತೇನೆ. ಮೋದಿ ಹಾಗೂ ಕೇಂದ್ರ ಸರ್ಕಾರದ ಬಗ್ಗೆ ಆಗ ಮಾತನಾಡುತ್ತೇನೆ ಎಂದು ಅವರು ಹೇಳಿದರು.

ಕೊಲೆ ಆರೋಪ ಎದುರಿಸುತ್ತಿರುವ ನಟ ದರ್ಶನ್ ಪ್ರಕರಣದ ಕುರಿತು ಕೇಳಲಾದ ಪ್ರಶ್ನೆಗೆ ಕೋಪದ ಕೈಗೆ ಬುದ್ಧಿ ಕೊಟ್ಟರೆ ಈ ರೀತಿಯ ಅವಘಡಗಳು ಸಂಭವಿಸುತ್ತವೆ. ಕರೆಯದೆ ಬರುವವನು ಕೋಪ, ಬರೆಯದೆ ಓದುವವನು ಕಣ್ಣು, ಬರಿಗಾಲಲ್ಲಿ ನಡೆಯುವವನು ಮನಸ್ಸು ಎಂದು ಇಬ್ಬರ ನಡುವಿನ ಗಲಾಟೆ ಬಗ್ಗೆ ಮಾರ್ಮಿಕವಾಗಿ ನುಡಿದಿದ್ದಾರೆ.

LEAVE A RESPONSE

Your email address will not be published. Required fields are marked *