ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ದಿಢೀರನೆ ಪ್ರಜ್ಞೆ ಕಳೆದುಕೊಂಡಿದ್ದರಿಂದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು ಎಂದು ದೆಹಲಿಯ ಏಮ್ಸ್ ವೈದ್ಯರು ತಿಳಿಸಿದ್ದಾರೆ.
92 ವರ್ಷದ ಮನಮೋಹನ್ ಸಿಂಗ್ ಹಲವು ದಿನಗಳಿಂದ ವಯೋ ಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಗುರುವಾರ ರಾತ್ರಿ ಏಕಾಏಕಿ ಪ್ರಜ್ಞಾಹೀನರಾಗಿದ್ದರಿಂದ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
ದೆಹಲಿಯ ಆಲ್ ಇಂಡಿಯಾ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ಆಸ್ಪತ್ರೆಗೆ ರಾತ್ರಿ 8.06 ನಿಮಿಷಕ್ಕೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು. 9.51ಕ್ಕೆ ನಿಧನರಾಗಿದ್ದಾರೆ ಎಂದು ಘೋಷಿಸಲಾಯಿತು ಎಂದು ವೈದ್ಯರು ಹೇಳಿದ್ದಾರೆ.
ಮನಮಹೋನ್ ಸಿಂಗ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಬೆಳಗಾವಿಯಲ್ಲಿ ಗಾಂಧಿ ಭೇಟಿಯ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಮಾವೇಶದ ನಡುವೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಹಿರಿಯ ಮುಖಂಡರು ದೆಹಲಿಗೆ ದೌಡಾಯಿಸಿದರು.
ಮನಮೋಹನ್ ಸಿಂಗ್ ನನ್ನ ಪಾಲಿಗೆ ಸ್ನೇಹಿತ ಹಾಗೂ ಮಾರ್ಗದರ್ಶಿಯಾಗಿದ್ದರು. ದೇಶದ ಆರ್ಥಿಕತೆಯನ್ನು ಸಮರ್ಥವಾಗಿ ಅರ್ಥ ಮಾಡಿಕೊಂಡಿದ್ದ ಅವರು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಅಲ್ಲದೇ ಒಬ್ಬ ಮನುಷ್ಯನಾಗಿ ಅವರು ದೇಶವನ್ನು ಮುನ್ನಡೆಸಿದ ರೀತಿ ಆದರ್ಶವಾದುದು ಎಂದು ರಾಹುಲ್ ಗಾಂಧಿ ಶೋಕ ವ್ಯಕ್ತಪಡಿಸಿದ್ದಾರೆ.