Monday, May 25, 2026
Google search engine
Homeಕಾನೂನುಮಗು ಕೊಟ್ಟು ಕೈ ಕೊಟ್ಟ ಬಿಜೆಪಿ ಮುಖಂಡನ ಪುತ್ರನಿಗೆ ಮಾಸಿಕ 75,000 ರೂ. ಪರಿಹಾರ ನೀಡಲು...

ಮಗು ಕೊಟ್ಟು ಕೈ ಕೊಟ್ಟ ಬಿಜೆಪಿ ಮುಖಂಡನ ಪುತ್ರನಿಗೆ ಮಾಸಿಕ 75,000 ರೂ. ಪರಿಹಾರ ನೀಡಲು ಹೈಕೋರ್ಟ್‌ ಆದೇಶ

ಬೆಂಗಳೂರು: 21 ವರ್ಷದ ವಿದ್ಯಾರ್ಥಿನಿಗೆ ಮದುವೆಯಾಗುವುದಾಗಿ ನಂಬಿಸಿ ತಾಯಿಯಾಗುವಂತೆ ಮಾಡಿ, ಆಕೆಯ ಜೀವನವನ್ನು ಸಂಪೂರ್ಣವಾಗಿ ನಾಶ ಮಾಡಿದ್ದೀರಿ ಎಂದು ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಕಿಡಿಕಾರಿದ ಹೈಕೋರ್ಟ್‌, ಮಾಸಿಕ 75 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ.ರಾವ್ ವಿರುದ್ಧ ತೀವ್ರ ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌, ಸಂತ್ರಸ್ತೆ ಮತ್ತು ಆಕೆಯ ಮಗುವಿನ ಪೋಷಣೆಗೆ ಮಾಸಿಕ 75 ಸಾವಿರ ರೂ.ಗಳನ್ನು ಪಾವತಿಸಬೇಕು ಎಂದು ಕಟ್ಟುನಿಟ್ಟಾಗಿ ನಿರ್ದೇಶನ ನೀಡಿದೆ.

ಇದೇ ವೇಳೆ, ಆರೋಪಿಯ ವಿರುದ್ದದ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿದ್ದು, ಸಂತ್ರಸ್ತೆ ಮತ್ತವರ ಕುಟುಂಬಸ್ಥರು, ಬಂಧುಗಳು ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಮುಂದೆ ಹೋಗಬಾರದೆಂದು ನಿರ್ಬಂಧ ವಿಧಿಸಿದೆ.

ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಕೋರಿ ಆರೋಪಿ ಕೃಷ್ಣ ಜೆ.ರಾವ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.

ಅರ್ಜಿದಾರ ಆರೋಪಿ ಸ್ವತಃ ಅಥವಾ ತನ್ನ ಪೋಷಕರ ಮೂಲಕ ಸಂತ್ರಸ್ತೆ ಹಾಗೂ ಮಗುವಿನ ಅಗತ್ಯತೆಗಳನ್ನು ಪೂರೈಸಲು ಪ್ರತಿ ತಿಂಗಳು 75 ಸಾವಿರ ರೂ. ಪಾವತಿಸಬೇಕು. ಮುಂದಿನ ಒಂದು ವಾರದೊಳಗೆ ಈ ಹಣ ಪಾವತಿಸಿ, ಅದರ ಬಳಿಕ ಪ್ರತಿ ತಿಂಗಳೂ ಹಣ ಪಾವತಿಸಬೇಕು ಎಂಬ ಷರತ್ತಿಗೆ ಒಳಪಟ್ಟು ಪ್ರಕರಣದ ಮುಂದಿನ ಎಲ್ಲ ಪ್ರಕ್ರಿಯೆಗಳಿಗೆ ತಡೆ ನೀಡುತ್ತಿರುವುದಾಗಿ ನ್ಯಾಯಪೀಠ ಹೇಳಿತು.

ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಸಂತ್ರಸ್ತೆಯ ಪರ ವಕೀಲರು, ವಿದ್ಯಾರ್ಥಿಗಳಾಗಿದ್ದ ಸಂದರ್ಭದಲ್ಲಿ ಅರ್ಜಿದಾರ ಮತ್ತು ಸಂತ್ರಸ್ತೆ ಪ್ರೀತಿಸುತ್ತಿದ್ದರು. ಬಳಿಕ ಮದುವೆಯಾಗುವುದಾಗಿ ಭರವಸೆ ನೀಡಿ ಹಲವು ಬಾರಿ ಅತ್ಯಾಚಾರವೆಸಗಿದ್ದಾರೆ. ಇದರಿಂದ ಸಂತ್ರಸ್ತೆ ಮಗುವಿಗೆ ಜನ್ಮ ನೀಡಿದ್ದು, ಇನ್ನು ಎರಡು ತಿಂಗಳು ಕಳೆದರೆ ಮಗುವಿಗೆ ಒಂದು ವರ್ಷ ಆಗಲಿದೆ. ಶ್ರೀ ಕೃಷ್ಣ ಎಂಬುದಾಗಿ ಮಗುವಿಗೆ ಹೆಸರಿಡುವುದಾಗಿ ತಿಳಿಸಿದ್ದಾರೆ.

ಈವರೆಗೂ ಆ ಕಾರ್ಯಕ್ಕೆ ಮುಂದಾಗಿಲ್ಲ. ಮಗುವನ್ನು ನೋಡಲು ಆರೋಪಿಯ ಕುಟುಂಬಸ್ಥರು ಬಂದಿಲ್ಲ. ಸಂತ್ರಸ್ತೆಯ ತಾಯಿ ಮನೆ ಕೆಲಸ ಮಾಡುತ್ತಾರೆ. ತಂದೆ ಚಿನ್ನಾಭರಣ ಅಂಗಡಿಯಲ್ಲಿ ದಿನಗೂಲಿ ನೌಕರರಾಗಿದ್ದು, ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ತಿಳಿಸಿದರು.

ಸರ್ಕಾರದ ಪರ ವಕೀಲರು, ಆರೋಪಿ ಮತ್ತವರ ಕುಟುಂಬಸ್ಥರು ಸಂತ್ರಸ್ತೆಗೆ 50 ಲಕ್ಷ ರೂ ನೀಡಿ ಮದುವೆಯಾಗುವುದಾಗಿ ಮತ್ತು ಮದುವೆಯ ಬಳಿಕ ವಿಚ್ಛೇದನ ನೀಡಬೇಕು ಎಂಬ ಷರತ್ತು ವಿಧಿಸಿದ್ದಾರೆ ಎಂದು ಪೀಠಕ್ಕೆ ವಿವರಿಸಿದರು.

ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು, ಸರ್ಕಾರದ ವಕೀಲರ ವಾದ ಸತ್ಯಕ್ಕೆ ದೂರವಾಗಿದೆ. ಇದು ಅರ್ಜಿದಾರರಿಗೆ ಸಂಬಂಧವಿಲ್ಲ. ಈ ಅಂಶ ಎಲ್ಲಿಂದ ಬಂದಿದೆ ಎಂಬುದೂ ಗೊತ್ತಿಲ್ಲ. ಅಲ್ಲದೆ, ಸ್ಥಳೀಯವಾಗಿ ಮಾಧ್ಯಮಗಳ ವಿಚಾರಣೆ ನಡೆಯುತ್ತಿದೆ. ಇದು ನಿಲ್ಲಬೇಕಾಗಿದೆ.

ಅರ್ಜಿದಾರರ ಕುಟುಂಬದವರು ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಂಡಿದ್ದು, ಮಾಧ್ಯಮದಲ್ಲಿನ ಸುದ್ದಿಗಳು ಅವರಿಗೆ ತೊಂದರೆ ನೀಡಿದಂತಾಗುತ್ತಿದ್ದು, ಮಾಧ್ಯಮ ಪ್ರಸಾರಕ್ಕೆ ತಡೆ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು. ವಾದ ಆಲಿಸಿದ ಪೀಠ, ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿದ್ದು, ವಿಚಾರಣೆಯನ್ನು ಜೂನ್ 5ಕ್ಕೆ ಮುಂದೂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments