ಬೆಂಗಳೂರು: ಕೇಂದ್ರ ಸಚಿವರು, ಅಧಿಕಾರಿಗಳು ಹಾಗೂ ಬಿಜೆಪಿಯವರೇ ಮೊದಲು ತ್ಯಾಗ ಮಾಡುವ ಮೂಲಕ ಪ್ರಾರಂಭಿಸಲಿ. ಆಮೇಲೆ ಜನರಿಗೆ ಕರೆ ನೀಡಲಿ ಎಂದು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಚಿನ್ನ ಖರೀದಿ ಮಾಡಬೇಡಿ, ಇಂಧನ ಬಳಕೆ ಕಡಿಮೆ ಮಾಡಿ ಎಂದು ಸಲಹೆ ನೀಡುತ್ತಿರುವ ಪ್ರಧಾನಿ ಮೋದಿ ಅವರ ಹೇಳಿಕೆಗೆ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸಚಿವರು, ಅಧಿಕಾರಿಗಳು, ಬಿಜೆಪಿ ಶಾಸಕರು, ಕಾರ್ಯಕರ್ತರು ಸ್ವಂತ ಹಾಗೂ ಸರ್ಕಾರಿ ಕಾರುಗಳನ್ನು ಬಳಸದೇ ಮೆಟ್ರೊ, ರೈಲು, ಬಸ್ ಗಳಲ್ಲಿ ಸಂಚರಿಸಲಿ ಎಂದು ಸವಾಲು ಹಾಕಿದರು.
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲಾ ಬೆಲೆಗಳು ಏರಿಕೆಯಾಗಿದ್ದು ಯಾಕೆ? ಯಾರಿಂದ ಬೆಲೆ ಏರಿಕೆಯಾಗಿದೆ ಎಂಬುದನ್ನು ವಿವರಿಸಬೇಕು ಎಂದು ಅವರು ಪ್ರಶ್ನಿಸಿದರು.
ಮದುವೆ, ಮುಂಜಿ ಮಾಡುವವರು ಚಿನ್ನ ತೆಗೆದುಕೊಳ್ಳಬೇಡಿ ಎಂದು ಹೇಳಲು ಸಾಧ್ಯವೇ? ಅವರು ಸಲಹೆಗಳನ್ನು ನೀಡುತ್ತಾರೆ. ಹಿಂದೆ ಕೋವಿಡ್ ಬಂದಾಗ ದೀಪ ಹಚ್ಚಿಸಿ, ಚಪ್ಪಾಳೆ ತಟ್ಟಿಸಿದರು. ಅದರಿಂದ ಸಮಸ್ಯೆ ನಿಂತು ಹೋಯಿತಾ? ಮದುವೆಯಾದ ಮಹಿಳೆ ಚಿನ್ನದ ತಾಳಿ, ಸರ ಹಾಕಿಕೊಳ್ಳುವುದುನ್ನು ಬೇಡ ಎನ್ನಲು ಸಾಧ್ಯವೇ? ಅವರ ಬದುಕಿನಲ್ಲಿ ಕಷ್ಟವೋ ಸುಖವೋ, ಸಾಲ ಮಾಡಿ ಚಿನ್ನ ಖರೀದಿ ಮಾಡುತ್ತಾರೆ ಎಂದು ಅವರು ಹೇಳಿದರು.
ಎಲ್ಲರನ್ನು ಸಾರ್ವಜನಿಕ ಸಾರಿಗೆಯಲ್ಲೇ ಓಡಾಡಿ ಎನ್ನುವುದಾದರೆ, ಪ್ರಧಾನ ಮಂತ್ರಿಗಳು ಕೇಂದ್ರ ಸರ್ಕಾರದ ಅಧಿಕಾರಿಗಳು ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುವಂತೆ ಸೂಚಿಸಲಿ. ಅವರ ಕೇಂದ್ರ ಸಚಿವರಿಗೆ ತಾಕೀತು ಮಾಡಲಿ. ನಾವು ಮೊದಲು ನಡೆದುಕೊಂಡು ನಂತರ ಸಾಮಾನ್ಯ ಜನಕ್ಕೆ ಸಂದೇಶ ನೀಡಬೇಕು ಎಂದರು.
ಬಿಜೆಪಿಯವರು ತ್ಯಾಗ ಪ್ರಾರಂಭವಾಗಲಿ
ಜಗತ್ತಿನ ಪರಿಸ್ಥಿತಿ ಸರಿಯಿಲ್ಲ ಕೆಲವೊಮ್ಮೆ ತ್ಯಾಗಕ್ಕೂ ಸಿದ್ಧವಾಗಿರಬೇಕು ಎಂಬ ಕಾರಣಕ್ಕೆ ಸಂದೇಶ ನೀಡಿದ್ದಾರೆ ಎಂದಾಗ, “ಮೊದಲು ತ್ಯಾಗವನ್ನು ಮಂತ್ರಿಗಳು, ಕೇಂದ್ರ ಸರ್ಕಾರದ ಸಚಿವರು, ಅಧಿಕಾರಿಗಳು, ಬಿಜೆಪಿ ಆಡಳಿತ ರಾಜ್ಯಗಳಲ್ಲಿರುವ ಅಧಿಕಾರಿಗಳಿಂದ, ಅವರ ಪಕ್ಷದ ಶಾಸಕರು, ನಾಯಕರು ಹಾಗೂ ಕಾರ್ಯಕರ್ತರಿಂದ ತ್ಯಾಗ ಆರಂಭವಾಗಲಿ. ನಂತರ ಬೇರೆಯವರಿಗೆ ತ್ಯಾಗದ ಸಲಹೆ ನೀಡಲಿ” ಎಂದು ತಿರುಗೇಟು ನೀಡಿದರು.
ಬೆಂಗಳೂರಿಗೆ ಗ್ಯಾರಂಟಿ ಯೋಜನೆ; ಮೇ 13ರಂದು ಪ್ರಕಟ
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರೊಂದಿಗೆ ಜಿಬಿಎ ಸಭೆ ಮಾಡಿದ್ದೀರಿ ಎಂದು ಕೇಳಿದಾಗ, “ಸುರ್ಜೆವಾಲ ಅವರ ಜೊತೆ ರಾಜಕೀಯವಾಗಿ ಸಭೆ ಮಾಡಿದ್ದೇವೆ. ಅಧಿಕಾರಿಗಳನ್ನು ಕರೆದು ಕೆಲವು ಸೂಚನೆ ನೀಡಿದ್ದು, ಬೆಂಗಳೂರು ನಗರಕ್ಕೆ ದೊಡ್ಡ ಗ್ಯಾರಂಟಿಗಳನ್ನು ನೀಡುತ್ತಿದ್ದೇವೆ, ಈ ಬಗ್ಗೆ ಮೇ 13ರಂದು ಮಾಹಿತಿ ನೀಡುತ್ತೇವೆ” ಎಂದು ತಿಳಿಸಿದರು.



