ಬೆಂಗಳೂರು: ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಕರ್ನಾಟಕ ಕೌನ್ಸಿಲ್ ಫಾರ್ ಟೆಕ್ನಿಕಲ್ ವ್ಯವಸ್ಥಾಪಕ ನಿರ್ದೇಶಕ ವಿ. ಮುನಿಯಪ್ಪ ದೋಷಿ ಎಂದು ಲೋಕಾಯುಕ್ತ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ.
ಬರೋಬ್ಬರಿ 12 ವರ್ಷಗಳ ಸುದೀರ್ಘ ಕಾನೂನು ಹೋರಾಟದ ಬಳಿಕ ಲೋಕಾಯುಕ್ತ ನ್ಯಾಯಾಲಯದಿಂದ ಮಹತ್ವದ ತೀರ್ಪು ಹೊರಬಿದ್ದಿದೆ.
ನಗರದ ಬಸವ ಭವನದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ವಿ. ಮುನಿಯಪ್ಪ ವಿರುದ್ಧ 2014ರಲ್ಲಿ ಭ್ರಷ್ಟಾಚಾರ ಮತ್ತು ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು.
ಲೋಕಾಯುಕ್ತ ಪೊಲೀಸರು ನಡೆಸಿದ ತನಿಖೆಯಲ್ಲಿ ಮುನಿಯಪ್ಪ ಅವರು ತಮ್ಮ ಅಧಿಕೃತ ಆದಾಯದ ಮೂಲಗಳಿಗಿಂತ ಅಕ್ರಮವಾಗಿ ಕೋಟ್ಯಾಂತರ ರೂ ಸಂಪಾದಿಸಿರುವುದು ಸಾಬೀತಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಮುನಿಯಪ್ಪ ಅವರಿಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 4.5 ಕೋಟಿ ರೂ ದಂಡ ವಿಧಿಸಿದೆ.
ಒಂದು ವೇಳೆ ವಿಧಿಸಲಾದ ದಂಡದ ಮೊತ್ತವನ್ನು ಪಾವತಿಸಲು ವಿಫಲವಾದರೆ, ಆರೋಪಿಯು ಹೆಚ್ಚುವರಿಯಾಗಿ 6 ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. 2014ರಲ್ಲಿ ದಾಖಲಾಗಿದ್ದ ಈ ಭ್ರಷ್ಟಾಚಾರದ ಕಲೆಗೆ 2026ರಲ್ಲಿ ಅಂತಿಮವಾಗಿ ಶಿಕ್ಷೆಯ ಮುದ್ರೆ ಬಿದ್ದಂತಾಗಿದೆ.



