Thursday, May 14, 2026
Google search engine
Homeದೇಶಇಂದು ರಾತ್ರಿ ಮಹಾಕುಂಭ ಮೇಳಕ್ಕೆ ತೆರೆ: 1 ಕೋಟಿ ಪುಣ್ಯಸ್ನಾನ ನಿರೀಕ್ಷೆ

ಇಂದು ರಾತ್ರಿ ಮಹಾಕುಂಭ ಮೇಳಕ್ಕೆ ತೆರೆ: 1 ಕೋಟಿ ಪುಣ್ಯಸ್ನಾನ ನಿರೀಕ್ಷೆ

ಉತ್ತರ ಪ್ರದೇಶದಲ್ಲಿ ಪ್ರಯಾಗ್‌ರಾಜ್‌ನಲ್ಲಿ ಕಳೆದ 45 ದಿನಗಳಿಂದ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಬುಧವಾರ ಮಹಾಶಿವರಾತ್ರಿಯಂದು ತೆರೆ ಬೀಳಲಿದೆ.

ಬುಧವಾರ ತಡರಾತ್ರಿ ನಡೆಯುವ ಶಿವರಾತ್ರಿಯ ಕೊನೆಯ ಅಮೃತಸ್ನಾನದೊಂದಿಗೆ ಮಹಾಕುಂಭ ಮೇಳ ಸಂಪನ್ನಗೊಳ್ಳಲಿದೆ. ಶಿವರಾತ್ರಿಯಂದು ಸುಮಾರು 1 ಕೋಟಿ ಜನರು ಪುಣ್ಯಸ್ನಾನ ಮಾಡುವ ನಿರೀಕ್ಷೆಇದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಮಹಾಕುಂಭ ಮೇಳದಲ್ಲಿ ಇದುವರೆಗೆ ಸುಮಾರು 63.35 ಕೋಟಿ ಜನರು ಭೇಟಿ ನೀಡಿದ್ದು, ಇದು ವಿಶ್ವದಲ್ಲೇ ಅತೀ ದೊಡ್ಡ ಧಾರ್ಮಿಕ ಕಾರ್ಯಕ್ರಮವಾಗಿ ಇತಿಹಾಸ ಪುಟ ಸೇರಿದೆ.

45 ದಿನಗಳ ಕುಂಭಮೇಳದಲ್ಲಿ 40 ಕೋಟಿ ಜನರು ಭೇಟಿ ಮಾಡುವ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆ ಮೀರಿ ಜನರು ಭೇಟಿ ನೀಡುತ್ತಿರುವುದು ಸಂಘಟಕರಿಗೆ ದೊಡ್ಡ ತಲೆನೋವಾಗಿದೆ. ಈ ಹಿನ್ನೆಲೆಯಲ್ಲಿ ಕುಂಭಮೇಳದ ದಿನಾಂಕ ವಿಸ್ತರಣೆ ಮಾಡುವುದಿಲ್ಲ ಎಂದು ಘೋಷಣೆ ಮಾಡಲಾಗಿದೆ.

ಫೆಬ್ರವರಿ 26ರಂದು ಮಹಾಶಿವರಾತ್ರಿ ಅಂತಿಮ ಪುಣ್ಯಸ್ನಾನದ ಸಿದ್ಧತೆಗಾಗಿ ಮಂಗಳವಾರ ಸಂಜೆ 4 ಗಂಟೆಯಿಂದಲೇ ಮಹಾ ಕುಂಭಮೇಳದ ಆವರಣದಲ್ಲಿ ವಾಹನ ಪ್ರವೇಶ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಭಕ್ತಾದಿಗಳ ಹೆಚ್ಚಿನ ಒಳಹರಿವಿಗೆ ಅವಕಾಶ ಕಲ್ಪಿಸಲು ಸಂಜೆ 6 ಗಂಟೆಯಿಂದ ಪ್ರಯಾಗರಾಜ್ ನಗರದಾದ್ಯಂತ ಇದೇ ರೀತಿಯ ಸಂಚಾರ ನಿರ್ಬಂಧ ಇರಲಿದೆ.

ಬೃಹತ್‌ ಆಧ್ಯಾತ್ಮಿಕ ಕೂಟದ ಸಮಯದಲ್ಲಿ ಜನಸಂದಣಿಯನ್ನು ಸುಗಮವಾಗಿ ನಿರ್ವಹಿಸಲು ಮತ್ತು ದಟ್ಟಣೆಯನ್ನು ತಪ್ಪಿಸಲು ಅಧಿಕಾರಿಗಳು ಈ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಈ ನಿರ್ಬಂಧಿತ ಅವಧಿಯಲ್ಲಿ ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳಿಗೆ ಮಾತ್ರವೇ ಅನುಮತಿ ನೀಡುವುದಾಗಿ ತಿಳಿಸಿದ್ದಾರೆ.

ಮೇಳದಲ್ಲಿ ಏನೆಲ್ಲ ವ್ಯವಸ್ಥೆ?

ಅತಿ ಜನದಟ್ಟಣೆ ಉದ್ದೇಶದಿಂದ ಈ ಸಂಚಾರ ನಿರ್ಬಂಧಗಳು ಜಾರಿಯಲ್ಲಿರುತ್ತವೆ. ಆದರೆ ಅಗತ್ಯ ಸೇವೆಗಳ ಪೂರೈಕೆಗೆ ಯಾವುದೇ ಅಡ್ಡಿ ಇರುವುದಿಲ್ಲ. ಹಾಲು, ತರಕಾರಿಗಳು, ಔಷಧಗಳು, ಇಂಧನ ಮತ್ತು ತುರ್ತು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶವಿರಲಿದೆ. ವೈದ್ಯರು, ಪೊಲೀಸ್ ಸಿಬ್ಬಂದಿ ಮತ್ತು ಆಡಳಿತ ಸಿಬ್ಬಂದಿಗೂ ಪ್ರವೇಶ ಇರಲಿದೆ.

ಭಕ್ತರಿಗೆ ವಿಶೇಷ ಸೂಚನೆ:

ಭಕ್ತಾದಿಗಳು ತಮ್ಮ ನಿಯೋಜಿತ ಘಾಟ್‌ಗಳಲ್ಲಿ ಮಾತ್ರವೇ ಸ್ನಾನ ಮಾಡಲು ಮತ್ತು ಪ್ರಾರ್ಥನೆಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಆಯಾ ಸೂಚಿತ ಶಿವನ ದೇವಾಲಯಗಳಿಗೆ ತೆರಳುವುದರಿಂದ ಈ ಭಾಗದಲ್ಲಿ ಜನಸಂದಣಿ ಕೂಡ ಕಡಿಮೆಯಾಗಲಿದೆ.

ದಕ್ಷಿಣಿ ಜುನ್ಸಿ ಮಾರ್ಗದಿಂದ ಆರೈಲ್ ಘಾಟ್, ಉತ್ತರಿ ಜುನ್ಸಿ ಮಾರ್ಗದಿಂದ ಹರಿಶ್ಚಂದ್ರ ಘಾಟ್ ಮತ್ತು ಹಳೆ ಜಿಟಿ ಘಾಟ್, ಪಾಂಡೆ ಕ್ಷೇತ್ರದ ಮಾರ್ಗವಾಗಿ ಭಾರದ್ವಾಜ್ ಘಾಟ್, ನಾಗವಾಸುಕಿ ಘಾಟ್, ಮೋರಿ ಘಾಟ್, ಕಾಳಿ ಘಾಟ್, ರಾಮ್ ಘಾಟ್ ಮತ್ತು ಹನುಮಾನ್ ಘಾಟ್, ಆರೈಲ್ ವಲಯದಿಂದ ಆರೈಲ್ ಘಾಟ್ ಕಡೆಗೆ ಭಕ್ತರು ಆಗಮಿಸಲು ವ್ಯವಸ್ಥೆ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments