ಬೇರೊಂದು ಮದುವೆ ಆಗಿದ್ದು, ಡಿವೋರ್ಸ್ ನೀಡುವಂತೆ ಪತಿ ಬೆದರಿಕೆ ಹಾಕುತ್ತಿದ್ದರಿಂದ ನೊಂದ ಪತ್ನಿ ಇಬ್ಬರು ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬಾಗಲಗುಂಟೆಯ ಭುವನೇಶ್ವರಿನಗರದಲ್ಲಿ ವಾಸವಿದ್ದ ಐದು ವರ್ಷದ ಪುತ್ರಿ ಬೃಂದಾ ಹಾಗೂ ಒಂದುವರೆ ವರ್ಷದ ಪುತ್ರ ಭುವನ್ ನನ್ನು ಕೊಂದು ತಾಯಿ ವಿಜಯಲಕ್ಷ್ಮೀ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಐದು ವರ್ಷದ ಹಿಂದೆ ರಾಯಚೂರಿನ ಮಸ್ಕಿ ಮೂಲದ ವಿಜಯಲಕ್ಷ್ಮಿ ಮತ್ತು ರಮೇಶ್ ಮದುವೆ ಆಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ದಂಪತಿಗೆ ಇಬ್ಬರು ಮಕ್ಕಳಿದ್ದು, ಕ್ಷುಲಕ ಕಾರಣಕ್ಕೆ ಇಬ್ಬರ ನಡುವೆ ಪದೇಪದೆ ಜಗಳ ಆಗುತ್ತಿತ್ತು.
ಗುರುವಾರ ವಿಜಯಲಕ್ಷ್ಮಿ ತಂಗಿ ಮನೆಗೆ ಬಂದು ನೋಡಿದಾಗ ಅತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆಂದು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾನು ಮತ್ತೊಂದು ಮದುವೆಯಾಗಿದ್ದು, ಡೈವೋರ್ಸ್ ಕೊಡುವಂತೆ ಪತ್ನಿಗೆ ಪತಿ ರಮೇಶ್ ಬೆದರಿಕೆ ಹಾಕುತ್ತಿದ್ದ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಹೀಗಾಗಿ ಪದೇ ಪದೆ ಕುಟುಂಬದಲ್ಲಿ ಜಗಳ ಆಗುತ್ತಿತ್ತು. ಈ ವಿಚಾರ ವಿಜಯಲಕ್ಷ್ಮಿ ತನ್ನ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದಳು ಎನ್ನಲಾಗುತ್ತಿದೆ.
ಪತಿ ಬೇರೊಂದು ಮದುವೆ ಆಗಿ ಡಿವೋರ್ಸ್ ಕೇಳಿ ಕಿರುಕುಳ ನೀಡುತ್ತಿದ್ದರಿಂದ ನೊಂದು ಮಕ್ಕಳನ್ನು ಕೊಂದು ವಿಜಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



