ಹಾವೇರಿ: ಅಕ್ರಮ ಸಂಬಂಧಕ್ಕೆ ಅಡ್ಡಿ ಅಂತ ಪ್ರಿಯಕರನ ಜೊತೆಗೂಡಿ 4 ವರ್ಷದ ಮಗಳನ್ನೇ ಹೆತ್ತತಾಯಿ ಕೊಂದ ಅಮಾನುಷ ಘಟನೆ ದಾವಣಗೆರೆ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ನಡೆದಿದೆ.
ರಾಣೆಬೆನ್ನೂರು ತಾಲೂಕಿನ ಗುಡ್ಡದ ಅನ್ವೇರಿ ಗ್ರಾಮದಲ್ಲಿ ನಾಲ್ಕು ವರ್ಷದ ಮಗಳು ಪ್ರಿಯಾಂಕಾಳನ್ನು ತಾಯಿ ಗಂಗಮ್ಮ ಹಾಗೂ ಪ್ರಿಯಕರ ಅಣ್ಣಪ್ಪ ಮಡಿವಾಳ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ಆಗಸ್ಟ್ 2ರಂದು ಮಗುವನ್ನು ಕೊಲೆ ಮಾಡಿದ ಆರೋಪಿಗಳು ನಂತರ ಯಾರಿಗೂ ಗೊತ್ತಾಗದಂತೆ ಸಮೀಪದ ತುಂಗಾ ಮೇಲ್ದಂಡೆ ಕಾಲುವೆ ಬಳಿ ಮುಖ ಸುಟ್ಟು, ಬಳಿಕ ಪ್ರಿಯಾಂಕಾಳ ಶವವನ್ನು ಕಾಲುವೆಗೆ ಎಸೆದಿದ್ದರು. ಬಳಿಕ ಮೃತದೇಹವು ಪತ್ತೆಯಾಗಿತ್ತು.
ಈ ಬಗ್ಗೆ ಅಪರಿಚಿತ ಶವ ಎಂದು ಪರಿಗಣಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅಂತ್ಯಕ್ರಿಯೆಯನ್ನೂ ನೆರವೇರಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪತಿಯನ್ನು ತೊರೆದು ಪ್ರಿಯಕರನ ಜೊತೆಗಿದ್ದ ಮಹಿಳೆ: ಮಂಜುನಾಥ್ ಮತ್ತು ಗಂಗಮ್ಮ ದಂಪತಿಗೆ ಪ್ರಿಯಾಂಕಾ ಎಂಬ ಮಗಳಿದ್ದಳು. ಈ ಮಧ್ಯ ಗಂಗಮ್ಮ ಅಣ್ಣಪ್ಪ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ಆತನ ಜೊತೆ ವಾಸಿಸುತ್ತಿದ್ದಳು.
ಪ್ರಿಯಾಂಕಾಳನ್ನು ಸಹ ಗಂಗಮ್ಮ ಕರೆದೊಯ್ದಿದ್ದಳು. ಅಣ್ಣಪ್ಪ ಮತ್ತು ಗಂಗಮ್ಮ ಪ್ರಿಯಾಂಕಾಳನ್ನು ಕರೆದುಕೊಂದು ಗುಡ್ಡದ ಅನ್ವೇರಿ ಗ್ರಾಮ ತೊರೆದು ಬೇರೆ ಊರಿನಲ್ಲಿ ವಾಸಿಸುತ್ತಿದ್ದಳು. ಬಳಿಕ ಮತ್ತೆ ಗುಡ್ಡದ ಅನ್ವೇರಿಗೆ ಮರಳಿದ್ದರು. ಈ ಮಧ್ಯ ಮಂಜುನಾಥ ಮಗಳನ್ನಾದರೂ ಕಳಿಸು ಎಂದು ಕೇಳುತ್ತಿದ್ದ. ಪತಿಯು ತನ್ನ ಮಗಳನ್ನು ಕೊಡುವಂತೆ ಕೇಳಿಕೊಂಡು ಸೆಪ್ಟೆಂಬರ್ 8ರಂದು ಆಕೆಯ ಬಳಿ ಕೇಳಿಕೊಂಡು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಪತಿ ಮಂಜುನಾಥ್ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎಂದು ಅಣ್ಣಪ್ಪ ಮತ್ತು ಗಂಗಮ್ಮ ಗುಡ್ಡದ ಆನ್ವೇರಿ ಗ್ರಾಮದ ಮನೆಯಲ್ಲಿ ಪ್ರಿಯಾಂಕಾಳ ಕತ್ತು ಹಿಸುಕಿ ಉಸಿರುಗಟ್ಟಿಸಿ, ಕೊಂದು ಕಾಲುವೆಗೆ ಎಸೆದಿದ್ದರು. ಈ ಬಗ್ಗೆ ಪತಿ ನೀಡಿದ ದೂರಿನ ಮೇರೆ ಪ್ರಕರಣ ದಾಖಲಿಸಿಕೊಂಡಿರುವ ಆರೋಪಿಗಳನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.



