ನವದೆಹಲಿ: ಭಾರತದಲ್ಲಿ ಹಲವೆಡೆ ದಾಳಿ ಸಂಚು ರೂಪಿಸಲು ನೆರವಾಗುತ್ತಿದ್ದ ಐಸಿಸ್ ಉಗ್ರ ಸಂಘಟನೆಯ ಸ್ಲಿಪರ್ ಸೆಲ್ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಉಗ್ರರನ್ನು ಮುಂಬೈನಲ್ಲಿ ಬಂಧಿಸಲಾಗಿದೆ.
ಮಹಾರಾಷ್ಟ್ರದ ಪುಣೆಯ ಐಸಿಸ್ ಮಾಡ್ಯೂಲ್ ಪ್ರಕರಣದಲ್ಲಿ ಇಂಡೋನೇಷ್ಯಾದಿಂದ ಭಾರತಕ್ಕೆ ಮರಳುತ್ತಿದ್ದ ಇಬ್ಬರು ಉಗ್ರರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ.
ಅಬ್ದುಲ್ಲಾ ಫಯಾಜ್ ಶೇಖ್ ಮತ್ತು ತಲ್ಹಾ ಲಿಯಾಕತ್ ಖಾನ್ ಬಂಧಿತ ಉಗ್ರರಾಗಿದ್ದು, ಪ್ರಾಥಮಿಕ ತನಿಖೆ ನಂತರ ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರ, ಗುಜರಾತ್ ಮತ್ತು ಭಾರತದ ಇತರ ಭಾಗಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಐಸಿಸ್ ಮೂಲಕ ಪ್ರಾಯೋಜಿತ ಪಿತೂರಿಯಲ್ಲಿ ಇಬ್ಬರೂ ತೊಡಗಿದ್ದರು ಎಂದು ಹೇಳಲಾಗಿದ್ದು, ಇವರಿಬ್ಬರನ್ನು ತನಿಖೆಗೊಳಪಡಿಸಿದರೆ ಹಲವು ಮಹತ್ವದ ವಿಷಯಗಳು ಬಯಲಿಗೆ ಬರುತ್ತವೆ ಎಂದು ಊಹಿಸಲಾಗಿದೆ.
ಆರೋಪಿಗಳು ಐಇಡಿಗಳಿಗಾಗಿ ಕಾರ್ಯಾಗಾರಗಳನ್ನು ಆಯೋಜಿಸುವುದು, ಗುಂಡು ಹಾರಿಸುವ ಅಭ್ಯಾಸಕ್ಕಾಗಿ ಸ್ಥಳಗಳನ್ನು ಹುಡುಕುವುದು ಮತ್ತು ಕಾಡುಗಳಲ್ಲಿ ಅಡಗಿಕೊಳ್ಳುವುದು, ಹಾಗೆಯೇ ಸಶಸ್ತ್ರ ದರೋಡೆ ಮತ್ತು ಕಳ್ಳತನದ ಮೂಲಕ ಹಣವನ್ನು ಸಂಗ್ರಹಿಸುವುದು ಮುಂತಾದ ಅನೇಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು ಎಂದು ಎನ್ ಐಎ ಅಧಿಕಾರಿಗಳು ಹೇಳಿದ್ದಾರೆ.



