ನವದೆಹಲಿ: ಮದ್ಯದ ದೊರೆ ಉದ್ಯಮಿ ವಿಜಯ್ ಮಲ್ಯ ಇನ್ನೂ 6848 ಕೋಟಿ ರೂ. ಸಾಲ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದೆ.
ಬ್ಯಾಂಕ್‌ಗಳು ತಾವು ವಾಸ್ತವವಾಗಿ ಬಾಕಿ ಉಳಿಸಿಕೊಂಡಿದ್ದಕ್ಕಿಂತ ಎರಡು ಪಟ್ಟು ಹೆಚ್ಚು ಮೊತ್ತವನ್ನು ವಸೂಲಿ ಮಾಡಿಕೊಂಡಿವೆ ಎಂದು ಉದ್ಯಮಿ ವಿಜಯ್ ಮಲ್ಯ ಸಂದರ್ಶನವೊಂದರಲ್ಲಿ ಹೇಳಿಕೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಸ್ಪಷ್ಟನೆ ನೀಡಿದೆ.
ಸಾಲ ವಸೂಲಾತಿ ನ್ಯಾಯಾಧೀಕರಣದ ಪ್ರಕಾರ, ಕಿಂಗ್‌ಫಿಷರ್ ಏರ್‌ಲೈನ್ಸ್ 2013ರ ಜೂನ್‌ನಲ್ಲಿ 6,848 ಕೋಟಿ ರೂಪಾಯಿ ಸುಸ್ತಿ ಸಾಲವನ್ನು ಹೊಂದಿತ್ತು. ಆದರೆ 2025ರ ಜೂನ್ 10ಕ್ಕೆ ಸಾಲ ಮತ್ತು ಬಡ್ಡಿ, ಚಕ್ರಬಡ್ಡಿ ಸೇರಿ ಒಟ್ಟಾರೆ ಮೊತ್ತ 17,781 ಕೋಟಿ ರೂಪಾಯಿಗೆ ಏರಿದೆ.
ಬ್ಯಾಂಕ್‌ಗಳು 10,815 ಕೋಟಿ ರೂಪಾಯಿ ಹಣವನ್ನು ವಿಜಯ ಮಲ್ಯರಿಂದ ವಸೂಲಿ ಮಾಡಿಕೊಂಡಿವೆ. ಇನ್ನೂ 6,848 ಕೋಟಿ ರೂಸಾಲದ ಹಣ ವಸೂಲಿ ಬಾಕಿ ಇದೆ. ವಿಜಯ ಮಲ್ಯ, ಬ್ಯಾಂಕ್‌ಗಳಿಗೆ ಸಾಲವನ್ನು ಮರುಪಾವತಿಸಿದ್ದೇನೆ ಎಂದು ಹೇಳಿದ್ದರಲ್ಲಿ ಬಡ್ಡಿ, ಚಕ್ರಬಡ್ಡಿ ಸೇರಿಲ್ಲ.
ಸಾಲದ ಮೂಲ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸುವವರೆಗೂ ಸಾಲದ ಬಡ್ಡಿ, ಚಕ್ರಬಡ್ಡಿ, ದಂಡವನ್ನು ವಿಧಿಸಲಾಗುತ್ತಲೇ ಇರುತ್ತದೆ.
ಡಿಆರ್‌ಟಿ ಪ್ರಕಾರ, ಬಡ್ಡಿ ಮತ್ತು ಇತರ ಶುಲ್ಕಗಳಾದ 10,933 ಕೋಟಿ ರೂ.ಗಳನ್ನು ಸೇರಿಸಿದರೆ, ಒಟ್ಟಾರೆ ಸಾಲದ ಮೊತ್ತ ಈಗ 17,781 ಕೋಟಿ ರೂ.ಗೆ ಏರಿದೆ.
ವಿಜಯ ಮಲ್ಯ ತಾವು ಪಡೆದ 6,848 ಕೋಟಿ ರೂ.ಗಳ ಸಾಲಕ್ಕೆ ಬದಲಾಗಿ ಬ್ಯಾಂಕುಗಳಿಗೆ 14,000 ಕೋಟಿ ರೂ.ಗಳನ್ನು ಪಾವತಿಸಿರುವುದಾಗಿ ಹೇಳಿಕೊಂಡಿದ್ದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದ್ದ ಪ್ರಕಾರ, ಬಾಕಿ ಮೊತ್ತದಲ್ಲಿ ಭವಿಷ್ಯ ನಿಧಿ ಮತ್ತು ವಿಮಾನಯಾನ ಸಂಸ್ಥೆಯ ಇತರ ಶಾಸನಬದ್ಧ ಬಾಕಿಗಳು ಸಹ ಸೇರಿವೆ.
ಒಟ್ಟು ಸಾಲದ ಮೊತ್ತ 17,781 ಕೋಟಿ ರೂ. ಅದರಲ್ಲಿ 10,814 ಕೋಟಿ ರೂ. ವಸೂಲಿಯಾಗಿದೆ. 6,967 ಕೋಟಿ ಇನ್ನೂ ವಸೂಲಿ ಮಾಡಬೇಕಾಗಿದೆ. ಯಾವುದೇ ಸಾಲವು ಬಡ್ಡಿಯೊಂದಿಗೆ ಸೇರಿಕೊಳ್ಳುತ್ತದೆ. ಹಣವನ್ನು ಸಂಪೂರ್ಣವಾಗಿ ಪಾವತಿಸುವವರೆಗೆ, ದಂಡದ ಬಡ್ಡಿಯೂ ಅದರ ಜೊತೆಗೂಡುತ್ತದೆ.


