ನವದೆಹಲಿ: 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ (ವಿಕಸಿತ ಭಾರತ) ಮಾಡಿಯೇ ಮಾಡುತ್ತೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ಹಾಗೂ ದೇಶದ ಪ್ರಧಾನಿಯಾಗಿ ಮೋದಿ ಅವರು ಸತತ 25 ವರ್ಷಗಳಿಂದ ಅಧಿಕಾರದಲ್ಲಿರುವ ಹಿನ್ನೆಲೆಯಲ್ಲಿ ಬುಧವಾರ ನಡೆದ ‘ವಿಕಸಿತ ಭಾರತ ಸಂಕಲ್ಪ ಸಭಾ’ವನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಅವರು, ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಸಮಾಜವನ್ನು ವಿಭಜಿಸುವುದು ದೇಶ ಎದುರಿಸುತ್ತಿರುವ ಅತಿದೊಡ್ಡ ಸವಾಲುಗಳಲ್ಲಿ ಒಂದಾಗಿದೆ ಎಂದಿದ್ದಾರೆ.
‘ರೈತನ ಹೊಲಕ್ಕೆ ನೀರಿಲ್ಲದಿದ್ದಾಗ, ಆ ಸಮಸ್ಯೆ ಕೇವಲ ಒಂದು ಜಾತಿಗೆ ಮಾತ್ರ ಸೀಮಿತವಾಗಿರುತ್ತದೆಯೇ?, ವಿದ್ಯುತ್ ಇಲ್ಲದಿದ್ದಾಗ ಕತ್ತಲು ಕೇವಲ ಒಂದು ಸಮುದಾಯದವನ್ನು ಆವರಿಸುತ್ತದೆಯೇ? ಖಂಡಿತ ಇಲ್ಲ. ಸಮಸ್ಯೆ ಎಲ್ಲರದ್ದೂ ಎಂದಮೇಲೆ, ಪರಿಹಾರವೂ ಎಲ್ಲರಿಗೂ ತಲುಪಬೇಕು’ ಎಂದು ಮೋದಿ ಹೇಳಿದ್ದಾರೆ.
ಇಂದು ದೇಶದ ಜನರು ಕಾಣುತ್ತಿರುವ ವಿಕಸಿತ ಭಾರತದ ಕನಸು ಖಂಡಿತವಾಗಿಯೂ ನನಸಾಗಲಿದೆ. ನೂರು ವರ್ಷಗಳ ಹಿಂದೆ ನಮ್ಮ ಜನಸಂಖ್ಯೆ 40 ಕೋಟಿಗಿಂತ ಕಡಿಮೆಯಿತ್ತು; ಇಂದು ನಾವು 140 ಕೋಟಿಗೂ ಮೀರಿದ್ದೇವೆ. 140 ಕೋಟಿ ನಾಗರಿಕರು ಒಟ್ಟಾಗಿ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲಿದ್ದಾರೆ. ‘ವಿಕಸಿತ ಭಾರತ: ವಿ ವಿಲ್ ಡು ಇಟ್’, ‘ಟಾಪ್ 3 ಆರ್ಥಿಕತೆ: ವಿ ವಿಲ್ ಡು ಇಟ್’, ‘ಆತ್ಮನಿರ್ಭರ ಭಾರತ: ವಿ ವಿಲ್ ಡು ಇಟ್’, ‘ಜಾಗತಿಕ ಉತ್ಪಾದನಾ ಹಬ್: ವಿ ವಿಲ್ ಡು ಇಟ್’, ‘ಒಲಿಂಪಿಕ್ಸ್ ಆತಿಥ್ಯ: ವಿ ವಿಲ್ ಡು ಇಟ್’ ಈ ನಮ್ಮ ಆತ್ಮವಿಶ್ವಾಸ ಅಸಾಧಾರಣವಾದದ್ದು ಎಂದು ಮೋದಿ ಬಣ್ಣಿಸಿದ್ದಾರೆ.
ಇಸ್ರೇಲ್ಗೆ ಹೊರಟಿದ್ದ ಫೈದುಬೈ ವಿಮಾನವನ್ನು ಸಹ-ಪೈಲಟ್ ಪತನಗೊಳಿಸಲು ಯತ್ನಿಸಿದಾಗ ಇರಿತಕ್ಕೊಳಗಾಗಿಯೂ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರ ಸಾಹಸವನ್ನು ಪ್ರಧಾನಿ ಸ್ಮರಿಸಿದರು. ‘ಇಂದು ಇಡೀ ವಿಶ್ವವೇ ಭಾರತದ ಪೈಲಟ್ ಬಗ್ಗೆ ಮಾತನಾಡುತ್ತಿದೆ. ಭಾರತದಲ್ಲೇ ತಯಾರಾದ ವಿಮಾನಗಳ (ಮೇಡ್ ಇನ್ ಇಂಡಿಯಾ) ಬಗ್ಗೆ ಪ್ರಪಂಚವೇ ಮಾತನಾಡುವ ದಿನವೂ ಶೀಘ್ರದಲ್ಲೇ ಬರಲಿದೆ’ ಎಂದಿದ್ದಾರೆ.
