ಮೈದುನನ ಜೊತೆಗಿನ ಅಕ್ರಮ ಸಂಬಂಧ ಗಟ್ಟಿ ಮಾಡಿಕೊಳ್ಳಲು ಪತ್ನಿ ಗಂಡನನ್ನು ಕೊಂದು ಕರೆಂಟ್ ಹೊಡೆದಿದ್ದರಿಂದ ಮೃತಪಟ್ಟಿದ್ದಾನೆ ಎಂದು ಕಥೆ ಕಟ್ಟಿದ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಜುಲೈ 13ರಂದು ಕರೆಂಟ್ ಶಾಕ್ ಹೊಡೆದಿದೆ ಎಂದು ಖಾಸಗಿ ಆಸ್ಪತ್ರೆಗೆ ಕರಣ್ ದೇವ್ (36) ಅವರನ್ನು ಪತ್ನಿ ಸುಶ್ಮಿತಾ ದಾಖಲಿಸಿದ್ದರು. ವೈದ್ಯಕೀಯ ಪರೀಕ್ಷೆ ವೇಳೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
ಮೃತ ವ್ಯಕ್ತಿಯ ವಯಸ್ಸು ಮತ್ತು ಸಾವಿನ ಸಂದರ್ಭವನ್ನು ಉಲ್ಲೇಖಿಸಿ ದೆಹಲಿ ಪೊಲೀಸರು ತನಿಖೆ ನಡೆಸಿದಾಗ ಆಘಾತಕಾರಿ ವಿಷಯ ಬೆಳಕಿಗೆ ಬಂದಿದ್ದು, ಕರಣ್ ದೇವ್ ಕರೆಂಟ್ ಶಾಕ್ ನಿಂದ ಮೃತಪಟ್ಟಿಲ್ಲ. ಬದಲಾಗಿ ಕೊಲೆಯಾಗಿರುವುದು ದೃಢಪಟ್ಟಿದೆ.
ಚಿಕ್ಕ ವಯಸ್ಸಿಗೆ ಕರಣ್ ದೇವ್ ಅಸಹಜವಾಗಿ ಮೃತಪಟ್ಟಿದ್ದರಿಂದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಸೂಚಿಸಿದರು. ಆದರೆ ಪತ್ನಿ ಸುಶ್ಮಿತಾ ಹಾಗೂ ಸೋದರ ಸಂಬಂಧಿ ರಾಹುಲ್ ಆಕ್ಷೇಪ ವ್ಯಕ್ತಪಡಿಸಿದರು.
ಇದೇ ವೇಳೆ ಮೃತ ವ್ಯಕ್ತಿಯ ಕಿರಿಯ ಸಹೋದರ ಕುನಾಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ನಿದ್ದೆ ಮಾತ್ರೆ ನೀಡಿದ ಸುಶ್ಮಿತಾ ಹಾಗೂ ರಾಹುಲ್ ನಂತರ ಆಕಸ್ಮಿಕ ಸಾವು ಎಂದು ಬಿಂಬಿಸಲು ಕರೆಂಟ್ ಶಾಕ್ ಕೊಟ್ಟು ಕೊಲೆ ಮಾಡಿರುವುದು ದೃಢಪಟ್ಟಿದೆ.
ಇದೇ ವೇಳೆ ಸುಶ್ಮಿತಾ ಹಾಗೂ ರಾಹುಲ್ ಅವರ ಇನ್ ಸ್ಟಾಗ್ರಾಂ ಚಾಟ್ ಪರಿಶೀಲಿಸಿದಾಗ ಇಬ್ಬರೂ ಕೊಲೆಗೆ ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ.
ಮೃತನ ಪತ್ನಿ ಮತ್ತು ಆಕೆಯ ಮೈದುನನ ನಡುವೆ ಅನೈತಿಕ ಸಂಬಂಧವಿತ್ತು. ಇದರಿಂದಾಗಿ ಇಬ್ಬರೂ ಸೇರಿಕೊಂಡು ಕರಣ್‌ನನ್ನು ಕೊಲ್ಲಲು ನಿರ್ಧರಿಸಿದ್ದರು. ಊಟದ ಸಮಯದಲ್ಲಿ 15 ನಿದ್ರೆ ಮಾತ್ರೆಗಳನ್ನು ನೀಡಿ ಪ್ರಜ್ಞೆ ತಪ್ಪಿಸಿ, ಆಕಸ್ಮಿಕ ಸಾವು ಎಂದು ಬಿಂಬಿಸಲು ಕರಣ್‌ಗೆ ವಿದ್ಯುತ್ ಶಾಕ್ ನೀಡಿದ್ದಾಗಿ ಇಬ್ಬರೂ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ಪ್ರಿಯಕರ ಮೈದುನನ ಜೊತೆ ಸೇರಿಕೊಂಡು ಪತಿಯನ್ನು ಕೊಂದಿರುವುದಾಗಿ ಪತ್ನಿ ಸುಶ್ಮೀತಾ ಒಪ್ಪಿಕೊಂಡಿದ್ದಾಳೆ. ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಸೂಕ್ತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


