ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತಿ ಹಾಗೂ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರಿಗೆ ಜಿಲ್ಲಾಡಳಿತ ಅಧಿಕೃತವಾಗಿ ಬುಧವಾರ ಆಹ್ವಾನ ನೀಡಿದೆ.
ಹಾಸನದಲ್ಲಿರುವ ಅವರ ನಿವಾಸಕ್ಕೆ ಬುಧವಾರ ಭೇಟಿ ನೀಡಿದ ಅಧಿಕಾರಿಗಳು, ಮೈಸೂರು ಪೇಟ ತೊಡಿಸಿ, ಫಲಪುಷ್ಪ ನೀಡಿ ಸಾಂಪ್ರದಾಯಿಕವಾಗಿ ಆಹ್ವಾನ ನೀಡಿದರು. ದಸರಾ ಆಹ್ವಾನವನ್ನು ಪ್ರೀತಿಯಿಂದ ಸ್ವೀಕರಿಸಿದ ಬಾನು ಮುಷ್ತಾಕ್ ತಾವು ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿದ್ದಾರೆ
ದಸರಾ ವಿಶೇಷಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಮತ್ತು ಸ್ವಾಗತ ಸಮಿತಿಯವರು ಉಪಸ್ಥಿತರಿದ್ದರು.
ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಾನು ಮುಷ್ತಾಕ್ ಅವರು ಕನ್ನಡಾಂಬೆಯ ಕುರಿತು 2023ರಲ್ಲಿ ನೀಡಿದ ಹೇಳಿಕೆಗಳ ಬಗ್ಗೆ ಸ್ಪಷ್ಟನೆ ಕೊಟ್ಟು ವೇದಿಕೆಗೆ ಬರಬೇಕು, ಇಲ್ಲದಿದ್ದರೆ ಅವರು ದಸರಾ ಉದ್ಘಾಟಿಸುವುದಕ್ಕೆ ನಮ್ಮ ವಿರೋಧವಿದೆ ಎಂದು ಸಂಸದ ಹಾಗೂ ರಾಜವಂಶಸ್ಥರಾದ ಯದುವೀರ್ ಒಡೆಯರ್, ಪ್ರತಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.
ಈ ಬಾರಿ 11 ದಿನ ದಸರಾ ನಡೆಯಲಿದೆ. ಸೆಪ್ಟೆಂಬರ್ 22ರಿಂದ ದಸರಾ ಆರಂಭ ಆಗುತ್ತದೆ. ಅಕ್ಟೋಬರ್ 2ರಂದು ವಿಜಯ ದಶಮಿ, ಜಂಬೂ ಸವಾರಿ ನಡೆಯಲಿದೆ. ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ನಾಡಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಬುಧವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸೆ.22 ದಸರಾ ಉದ್ಘಾಟನೆ
ಸೆಪ್ಟೆಂಬರ್ 22ರಂದು ಬೆಳಗ್ಗೆ 10.10ರಿಂದ 10.40ರ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದ ವೇದಿಕೆ ಕಾರ್ಯಕ್ರಮದಲ್ಲಿ ಅಧಿದೇವತೆಗೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ಚಾಲನೆ ದೊರೆಯಲಿದೆ.
ಅಕ್ಟೋಬರ್ 2ರಂದು ಮಧ್ಯಾಹ್ನ 1 ಗಂಟೆಯಿಂದ 1.18ರ ಧನುರ್ ಲಗ್ನದಲ್ಲಿ ಗಣ್ಯರು ಅರಮನೆ ಮುಂಭಾಗದ ಕೋಟೆ ಆಂಜನೇಯಸ್ವಾಮಿ ಆವರಣದಲ್ಲಿ ನಂದಿ ಪೂಜೆ ನೆರವೇರಿಸುವ ಮೂಲಕ ದಸರಾ ಮೆರವಣಿಗೆಗೆ ಚಾಲನೆ ನೀಡಲಾಗುವುದು.
ಅಕ್ಟೋಬರ್ 2ರ ಮಧ್ಯಾಹ್ನ 4.42ರಿಂದ 5.06 ನಿಮಿಷದ ಶುಭ ಕುಂಭ ಲಗ್ನದಲ್ಲಿ ಜಂಬೂ ಸವಾರಿ ಮೆರವಣಿಗೆ ಸಾಗಲಿದೆ. ಸುಮಾರು 5 ಕಿ.ಮೀ ದೂರದ ಬನ್ನಿ ಮಂಟಪದವರೆಗೆ ಚಿನ್ನದ ಅಂಬಾರಿ ಹೊತ್ತ ಗಜಪಡೆ ಸಾಗಲಿದ್ದು, ಆ ಮೂಲಕ ದಸರಾ ಮುಕ್ತಾಯವಾಗುತ್ತದೆ.



