ಆಫ್ಘಾನಿಸ್ತಾದ ವಿರುದ್ಧ ಬಹಿರಂಗ ಯುದ್ಧ ಘೋಷಿಸಿದ ಪಾಕಿಸ್ತಾನ ನಡೆಸಿದ ವಾಯುದಾಳಿಯಲ್ಲಿ 133ಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಮೇಲೆ ಆತ್ಮಾಹುತಿ ದಾಳಿ ನಡೆಸಲು ತಾಲಿಬಾನ್ ದೊಡ್ಡ ಪ್ರಮಾಣದಲ್ಲಿ ಸಿದ್ಧತೆ ಆರಂಭಿಸಿದೆ.
ಆಫ್ಘಾನಿಸ್ತಾನದಲ್ಲಿರುವ ತಾಲಿಬಾನ್ ಸರ್ಕಾರವನ್ನು ಕೇಂದ್ರೀಕರಿಸಿ ಪಾಕಿಸ್ತಾನದ ವಾಯುಪಡೆ ಯುದ್ಧ ವಿಮಾನಗಳು ಕಾಬೂಲ್, ಕಂದಹಾರ್ ಸೇರಿದಂತೆ ಹಲವು ನಗರಗಳ ಮೇಲೆ ದಾಳಿ ನಡೆಸಿದ್ದು, 133 ಮಂದಿ ಮಂದಿ ಬಲಿಯಾಗಿದ್ದಾರೆ. ಮತ್ತೊಂದೆಡೆ ಪಾಕಿಸ್ತಾನದ 55 ಯೋಧರನ್ನು ಹತ್ಯೆಗೈದಿರುವುದಾಗಿ ಆಫ್ಘಾನಿಸ್ತಾನ ಹೇಳಿಕೊಂಡಿದೆ.
ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಇನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ನಿಮ್ಮ ವಿರುದ್ಧ ಬಹಿರಂಗವಾಗಿ ಯುದ್ಧ ಘೋಷಿಸುತ್ತಿದ್ದೇವೆ. ಈಗ ನಮ್ಮ ಮತ್ತು ನಿಮ್ಮ ನಡುವೆ ನೇರ ಯುದ್ಧ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗಜಬ್ ಲಿಲ್ ಹಕ್ ಎಂಬ ಹೆಸರಿನಲ್ಲಿ ಆಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿದ ಪಾಕಿಸ್ತಾನ, ಹಲವರನ್ನು ಕೊಂದಿರುವುದಾಗಿ ಹೇಳಿಕೊಂಡಿದೆ. ಇದೇ ವೇಳೆ ಆಫ್ಘಾನಿಸ್ತಾನ ಕೂಡ ಪ್ರತಿದಾಳಿ ನಡೆಸಿ ಪಾಕ್ ಯೋಧನ್ನು ಹತ್ಯೆಗೈದಿರುವುದಾಗಿ ತಿಳಿಸಿದೆ.
ಕಾಬೂಲ್ ನಲ್ಲಿ ಕನಿಷ್ಠ ಮೂರು ದೊಡ್ಡ ಸ್ಫೋಟಗಳು ಕೇಳಿ ಬಂದಿವೆ. ಆದರೆ ಸಾವಿನ ಸಂಖ್ಯೆ ಬಗ್ಗೆ ಅಧಿಕೃತ ಹೇಳಿಕೆ ನೀಡದ ಆಫ್ಘಾನಿಸ್ತಾನ ಸರ್ಕಾರ, ಕಂದಹಾರ್ ನಲ್ಲಿ ಕೂಡ ಪಾಕಿಸ್ತಾನದ ವಾಯು ದಾಳಿ ನಡೆದಿದೆ ಎಂದು ದೃಢಪಡಿಸಿದೆ.
ಪಾಕಿಸ್ತಾನ ದಾಳಿ ಬೆನ್ನಲ್ಲೇ ಗಡಿಯಲ್ಲಿ ಪಾಕಿಸ್ತಾನ ಸೇನೆ ವಿರುದ್ಧ ದಾಳಿ ಮಾಡಿದ್ದೇವೆ. ಪಾಕಿಸ್ತಾನದ 12ಕ್ಕೂ ಅಧಿಕ ಶಿಬಿರಗಳನ್ನು ವಶಕ್ಕೆ ಪಡೆದಿದ್ದೇವೆ ಎಂದು ಆಫ್ಘಾನಿಸ್ತಾನ ಸರ್ಕಾರ ಹೇಳಿಕೊಂಡಿದೆ.
ಇದೇ ವೇಳೆ ಪಾಕಿಸ್ತಾನದ ದಾಳಿಗೆ ಪ್ರತೀಕಾರವಾಗಿ ತಾಲಿಬಾನ್ ಸರ್ಕಾರ ಆತ್ಮಾಹುತಿ ದಾಳಿಯ ದೊಡ್ಡ ಪಡೆಯನ್ನೇ ಸಜ್ಜುಗೊಳಿಸಿದ್ದು, ಶೀಘ್ರದಲ್ಲೇ ಪಾಕಿಸ್ತಾನದ ಮೇಲೆ ದಾಳಿ ಮಾಡಲು ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ.
ಪಾಕಿಸ್ತಾನ ಗಡಿಯ ಡುರಾಂಡ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಆತ್ಮಾಹುತಿ ದಾಳಿ ಪಡೆ ಸಜ್ಜಾಗಿ ನಿಂತಿದೆ ಎಂದು ಅದು ಹೇಳಿಕೊಂಡಿದೆ.



