Friday, April 25, 2025
Google search engine
Homeರಾಜಕೀಯಜಾತಿಗಣತಿ ಜನತೆಗೆ ಖುಷಿಯಾದರೆ ಬಿಜೆಪಿಗೆ ಸಹಿಸಿಕೊಳ್ಳಕ್ಕೆ ಆಗುತ್ತಿಲ್ಲ: ಬೈರತಿ ಸುರೇಶ್

ಜಾತಿಗಣತಿ ಜನತೆಗೆ ಖುಷಿಯಾದರೆ ಬಿಜೆಪಿಗೆ ಸಹಿಸಿಕೊಳ್ಳಕ್ಕೆ ಆಗುತ್ತಿಲ್ಲ: ಬೈರತಿ ಸುರೇಶ್

ಕೋಲಾರ: ಜಾತಿಗಣತಿ ವರದಿ ಜಾರಿಗೆ ತಂದಿರುವುದು ರಾಜ್ಯದ ಜನತೆಗೆ ಖುಷಿ ಉಂಟು ಮಾಡಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿಗರಿಗೆ ಮಾನ ಮರ್ಯಾದೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರ ಸಂವಿಧಾನದ ಪ್ರಕಾರವೇ ನಡೆಯುತ್ತಿದೆ. ಆದರೆ, ಬಿಜೆಪಿ ಹಾಗೂ ಜೆಡಿಎಸ್‌ ಕ್ಷುಲ್ಲಕ ರಾಜಕಾರಣ ಮಾಡುತ್ತಿವೆ’ ಎಂದು ಟೀಕಿಸಿದರು.

ಜಾತಿಗಣತಿ ವರದಿಯನ್ನು ಮಂಡನೆ ಮಾಡುತ್ತಿಲ್ಲ, ಪೆಟ್ಟಿಗೆಯಲ್ಲಿ ಇಟ್ಟಿದ್ದಾರೆ ಎಂಬುದಾಗಿ ಬಿಜೆಪಿಯವರೇ ಅನೇಕ ಬಾರಿ ಹೇಳಿದ್ದರು. ಈಗ ನಾವು ವರದಿ ಬಿಡುಗಡೆ ಮಾಡಿದ ತಕ್ಷಣ ರಾಜಕೀಯವೆಂದು ಟೀಕೆ ಮಾಡುವುದು ಸರಿಯೇ? ಇದರಲ್ಲಿ ಏನು ರಾಜಕೀಯ ಇದೆ’ ಎಂದು ಪ್ರಶ್ನಿಸಿದರು.

‘ರಾಜ್ಯದ ಶೇ 95 ಜನರ ಸಮೀಕ್ಷೆ ನಡೆಸಿ ಸಿದ್ಧಪಡಿಸಿರುವ ವರದಿ ಇದು. ಲಿಂಗಾಯತ ಸಮುದಾಯವೇ ನಂಬರ್‌ 1 ಇದೆ. 76 ಲಕ್ಷ ಲಿಂಗಾಯತರು ಇದ್ದಾರೆ. ಎರಡನೇ ಸ್ಥಾನದಲ್ಲಿ ಮುಸ್ಲಿಮರಿದ್ದು, ನಂತರ ಒಕ್ಕಲಿಗ ಸಮುದಾಯದವರಿದ್ದಾರೆ. ಇದರಿಂದ ಯಾರಿಗೂ ಬೇಸರಿಲ್ಲ. ಕಾಂಗ್ರೆಸ್‌ನಲ್ಲೂ ಅಪಸ್ವರ ಇಲ್ಲ. ಹಾಗೆ ನೋಡುವುದಾದರೆ ನನಗೇ ತುಸು ಬೇಸರವಿದೆ. ನಮ್ಮ ಸಮುದಾಯದ ಜಾಸ್ತಿ ಇರಬಹುದು, 65 ಲಕ್ಷ ಇದೆ ಅಂದುಕೊಂಡಿದ್ದೆ. ಇಲ್ಲಿ ನೋಡಿದರೆ ತೀರಾ ಕಡಿಮೆ ಆಗಿದ್ದು, 44 ಲಕ್ಷ ಇದೆ. ಅದನ್ನು ಒಪ್ಪಿಕೊಳ್ಳಬೇಕು; ರಾಜಕಾರಣ ಮಾಡಬಾರದು’ ಎಂದರು.

ಮನೆಗಳಿಗೆ ಹೋಗದೆ ಸಮೀಕ್ಷೆ ಮಾಡಿದ್ದಾರೆ ಎಂಬ ವಿರೋಧ ಪಕ್ಷದವರ ಆರೋಪಕ್ಕೆ, ‘1.60ಲಕ್ಷ ಶಿಕ್ಷಕರು ಜಾತಿ ಗಣತಿ ಮಾಡಿದ್ದಾರೆ. ಅವರೆಲ್ಲಾ ಬೇರೆ ಬೇರೆ ಸಮುದಾಯದವರು. ಶಿಕ್ಷಕರು ಸುಳ್ಳು ಬರೆಯುತ್ತಾರೆಯೇ? ಜಾತಿಗಣತಿ ಸ್ವಾತಂತ್ರ್ಯ ನಂತರ ಮೊದಲ ಬಾರಿ ನಡೆದಿದೆ. ಇದೀಗ ಜಾತಿಗಣತಿ ಮಾಡಿರುವುದಕ್ಕೆ ಎಲ್ಲರೂ ಖುಷಿಪಡಬೇಕು’ ಎಂದು ಹೇಳಿದರು.

‘ಬಿಜೆಪಿ, ಜೆಡಿಎಸ್‌ನವರಿಗೆ ಜಾತಿಗಣತಿ ನಡೆಸಲು ಯೋಗ್ಯತೆಯಿಲ್ಲ, ನಡೆಸಿದವರಿಗೆ ಸಹಕಾರ ನೀಡುವ, ಒಳ್ಳೆಯ ಮಾತನಾಡುವ ಯೋಗ್ಯತೆಯಿಲ್ಲ. ಬಿಜೆಪಿಯವರು ರಾಜಕಾರಣ ಮಾಡಲು ಬರಬಾರದು. ಈಗಾಗಲೇ ಎಲ್ಲಾ ಸಚಿವರಿಗೂ ವರದಿಯ ಪ್ರತಿ ನೀಡಿದ್ದು, ಏ.17ರಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅಂದು ನನ್ನ ಅಭಿಪ್ರಾಯ ಮಂಡಿಸುತ್ತೇನೆ’ ಎಂದರು.

ಶ್ರೀನಿವಾಸಪುರ ತಾಲ್ಲೂಕಿನ ಅರಣ್ಯ ಭೂಮಿ ವಿಚಾರವಾಗಿ ರೈತರು ಹಾಗೂ ಅರಣ್ಯಾಧಿಕಾರಿಗಳ ನಡುವೆ ಸಂಘರ್ಷದ ಕುರಿತು, ‘ಈ ಕುರಿತು ಸಭೆ ನಡೆಸಿ ಚರ್ಚಿಸಿದ್ದೇನೆ. ರೈತರ ಒಂದು ಅಡಿ ಜಮೀನನ್ನೂ ಅರಣ್ಯ ಇಲಾಖೆಯವರು ಪಡೆದುಕೊಳ್ಳಲು ಬಿಡುವುದಿಲ್ಲ. ಅದೇ ರೀತಿ ಅರಣ್ಯ ಜಮೀನನ್ನು ಖಾಸಗಿಯವರು ತೆಗೆದುಕೊಳ್ಳಲೂ ಬಿಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ನಮ್ಮದ ರೈತರ ಪರವಾಗಿರುವ ಪಕ್ಷ. ಬೇರೆ ಪಕ್ಷದವರ ಮಾತಿನಲ್ಲಿ ಒಂದು, ಕೃತಿಯಲ್ಲಿ ಇನ್ನೊಂದು ಮಾಡುವುದಿಲ್ಲ. ಕಾನೂನುಬದ್ಧವಾಗಿ ಪ್ರಕ್ರಿಯೆ ನಡೆಯುತ್ತದೆ. ರೈತರಿಗೆ ರೀತಿ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು’ ಎಂದರು.

ಡಿಸಿಸಿ ಬ್ಯಾಂಕ್, ಕೋಮುಲ್‌ ಚುನಾವಣೆ ಸಂಬಂಧ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಕುರಿತು, ‘ಶಾಸಕರಾದ ಎಸ್‌.ಎನ್‌.ನಾರಾಯಣಸ್ವಾಮಿ, ರೂಪಕಲಾ ಶಶಿಧರ್‌ ಪ್ರತ್ಯೇಕ ಸಂದರ್ಭದಲ್ಲಿ ಭೇಟಿಯಾಗಿ ಚರ್ಚಿಸಿದ್ದಾರೆ. ಅಲ್ಲದೇ, ನಾನು ಕೂಡ ಕೆಜಿಎಫ್‌, ಬಂಗಾರಪೇಟೆಗೆ ತೆರಳಿ ಭೇಟಿಯಾಗಿದ್ದೆ. ನನಗೆ ಅನಿಲ್‌, ಮಂಜು, ರೂಪಕಲಾ, ನಾರಾಯಣಸ್ವಾಮಿ ಎಲ್ಲರೂ ಒಂದೇ. ನಾವೆಲ್ಲಾ ಸಂವಿಧಾನದಡಿಯಲ್ಲಿ ಕೆಲಸ ಮಾಡುತ್ತಿದ್ದು, ಜನರಿಗೆ ಅನುಕೂಲ ಮಾಡುಕೊಡುವುದಷ್ಟೇ ನಮ್ಮ ಉದ್ದೇಶ’ ಎಂದರು.

ಹಾಲು ಒಕ್ಕೂಟದ ಅವ್ಯವಹಾರ ಸಾಬೀತುಪಡಿಸಲು ಸಿದ್ಧ ಎಂಬ ನಾರಾಯಣಸ್ವಾಮಿ ಹೇಳಿಕೆಗೆ, ‘ನಾನು ಹಾಗೂ ಸಹಕಾರ ಸಚಿವ ರಾಜಣ್ಣ ಶಾಸಕ ನಾರಾಯಣಸ್ವಾಮಿ ಜೊತೆ ಚರ್ಚಿಸುತ್ತೇವೆ. ಮಾಜಿ ನಿರ್ದೇಶಕರ ಅಭಿಪ್ರಾಯವನ್ನೂ ಪಡೆಯಲಾಗುವುದು. ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ. ಯಾವುದನ್ನು ಬಚ್ಚಿಡಲು ಆಗುವುದಿಲ್ಲ’ ಎಂದು ತಿಳಿಸಿದರು.

ಎರಡೂ ಸಂಸ್ಥೆಗಳ ಚುನಾವಣೆ ಕುರಿತು, ‘ಜೆಡಿಎಸ್‌ ಹಾಗೂ ಬಿಜೆಪಿಯವರು ಬದ್ಧವೈರಿಗಳಾಗಿದ್ದವರು. ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಒಂದಾದರು. ನಮ್ಮ ಪಕ್ಷದೊಳಗೆ ಹೊಂದಾಣಿಕೆ ನಡೆಸಲು ಆಗುವುದಿಲ್ಲವೇ?’ ಎಂದು ಕೇಳಿದರು.

ಬೆಲೆ ಏರಿಕೆ ಖಂಡಿಸಿ ಬಿಜೆಪಿಯವರು ಕೈಗೊಂಡಿರುವ ಜನಾಂದೋಲನ ಯಾತ್ರೆ ಕುರಿತು, ‘ನಮ್ಮ ಕಾಂಗ್ರೆಸ್‌ ಸರ್ಕಾರವನ್ನು ಮಾತ್ರ ಪತ್ರಕರ್ತರು ಪ್ರಶ್ನೆ ಮಾಡುತ್ತಿದ್ದೀರಿ. ಅಡುಗೆ ಅನಿಲದ ದರವನ್ನು 50 ಏರಿಸಿರುವ ಬಿಜೆಪಿಯನ್ನು ಯಾವತ್ತಾದರೂ ಪ್ರಶ್ನೆ ಮಾಡಿದ್ದೀರಾ? ಕೇಂದ್ರ ಬಿಜೆಪಿ ಸರ್ಕಾರದವರು ಬಡವರಿಗೆ ತೊಂದರೆ ಉಂಟು ಮಾಡಿದರೂ ಕೇಳಲ್ಲ. ಹಾಲಿನ ಮಾರಾಟ ದರ 4 ಹೆಚ್ಚಿಸಿ ನಾವು ತೆಗೆದುಕೊಂಡಿದ್ದೇವೆಯೇ? ಅದನ್ನು ರೈತರಿಗೆ ಹಸ್ತಾಂತರಿಸಿದೆವು. ಆ ಬಗ್ಗೆ ನಮ್ಮನ್ನು ಪ್ರಶಂಸಿಸಬೇಕಿತ್ತು. ಆದರೆ, ಯಾವುದೇ ಪತ್ರಿಕೆ ಹಾಗೂ ಸುದ್ದಿ ವಾಹಿನಿಗಳಲ್ಲಿ ಕಾಣಲಿಲ್ಲ’ ಎಂದರು.

ದರ ಹೆಚ್ಚಿಸಿರುವ ಬಿಜೆಪಿಯವರು ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆದುಕೊಂಡರೆ ಯಾರು ಹೊಣೆ? ಅದರ ವಿರುದ್ಧ ಕಾಂಗ್ರೆಸ್‌ನಿಂದಲೇ ಏ. 17ರಂದು ಹೋರಾಟ ನಡೆಸುತ್ತೇವೆ’ ಎಂದು ತಿಳಿಸಿದರು.
ಲಕ್ಷ ಜನ ಸೇರಿ ಸಮಾವೇಶ: ‘ಜಿಲ್ಲೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಸೇರಿಸಿ ಫಲಾನುಭವಿಗಳ ಸಮಾವೇಶ ಮಾಡಬೇಕು ಎಂಬ ಗುರಿ ಇದೆ. ಈ ಬಗ್ಗೆ ಅಧಿಕಾರಿಗಳ ಸಭೆ ಸೇರಿ ರೂಪುರೇಷೆ ಮಾಡಲಾಗುತ್ತಿದೆ. ಕಳೆದ ಸಾಲಿನ ಸವಲತ್ತುಗಳನ್ನು ಕೆಲ ಅಧಿಕಾರಿಗಳು ಈಗಾಗಲೇ ಹಂಚಿಕೆ ಮಾಡಿದ್ದಾರೆ. ಈ ಸಾಲಿನ ಫಲಾನುಭವಿಗಳ ಪಟ್ಟಿ ತಯಾರಿಸಲು ಸೂಚಿಸಿದ್ದೇನೆ. ಸದ್ಯದಲ್ಲೇ ಮುಖ್ಯಮಂತ್ರಿ ಜೊತೆ ಮಾತನಾಡಿ ದಿನಾಂಕ ನಿಗದಿಪಡಿಸಲಾಗುವುದು’ ಎಂದು ಸಚಿವ ಬೈರತಿ ಸುರೇಶ್ ಹೇಳಿದರು.

ಅಂಬೇಡ್ಕರ್‌ ಸ್ತಬ್ಧಚಿತ್ರಗಳ ಮೆರವಣಿಗೆ ಕ್ಲಾಕ್‌ ಟವರ್‌ನಲ್ಲೇ ಹೋಗಬೇಕೆಂಬ ಕೆಲವರ ಆಗ್ರಹಕ್ಕೆ ಪ್ರತಿಕ್ರಿಯಿಸಿ, ‘ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿರ್ಧಾರ ಕೈಗೊಳ್ಳುತ್ತಾರೆ. ನಾವೆಲ್ಲಾ ಇಲ್ಲಿ ಕುಳಿತುಕೊಂಡಿರುವುದಕ್ಕೆ ಕಾರಣ ಸಂವಿಧಾನ ಶಿಲ್ಪಿ ಅಂಬೇಡ್ಕರ್‌. ಕಾಂಗ್ರೆಸ್‌ ಸರ್ಕಾರ ಸಂವಿಧಾನದ ಪ್ರಕಾರ ನಡೆದುಕೊಳ್ಳುತ್ತದೆ’ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments