ಬಾಗಲಕೋಟೆ: ಹಳೇ ಬಾಗಲಕೋಟೆ ನಗರದಲ್ಲಿ ಫೆ.28ರವರೆಗೆ ನಿಷೇಧಾಜ್ಞೆ ಮುಂದುವರಿಯಲಿದ್ದು, ನವನಗರ ಹಾಗೂ ವಿದ್ಯಾಗಿರಿಯಲ್ಲಿ ನಿಷೇಧಾಜ್ಞೆ ಹಿಂಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ತಿಳಿಸಿದರು.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳೇ ನಗರದ 4 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಮುಂದುವರಿಕೆಯಾಗಲಿದೆ. ಹಿಂದೂ ಸಂಘಟನೆಗಳು ಫೆ.26ರಂದ ಬಾಗಲಕೋಟೆ ಚಲೋ ಕರೆ ನೀಡಿರುವುದು ಗೊತ್ತಾಗಿದೆ. ಆದರೆ ಯಾರು ನಮ್ಮನ್ನು ಇನ್ನೂವರೆಗೂ ಸಂಪರ್ಕಿಸಿಲ್ಲ. ಹಳೇ ನಗರದಲ್ಲಿ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ. ಒಂದು ವೇಳೆ ನಿಷೇಧಾಜ್ಞೆ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನವನಗರ ವ್ಯಾಪ್ತಿಯಲ್ಲಿ ಪ್ರತಿಭಟನೆ ಅನುಮತಿ ಕೇಳಿದರೆ ಪರಿಶೀಲನೆ ನಡೆಸುತೇವೆ. ಕಳೆದ ಮೂರು ದಿನಗಳಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಜನ ಜೀವನ ಸಹಸ ಸ್ಥಿತಿಯಲ್ಲಿದೆ. ಈಗಾಗಲೇ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಮೂರು ಎಫ್ಐಆರ್ ದಾಖಲಾಗಿವೆ. ವಿಡಿಯೋ ಸಾಕ್ಷಿ ಆಧರಿಸಿ ಎರಡು ಕೋಮಿನ ಒಟ್ಟು 10 ಜನರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಸಿದ್ದಾರ್ಥ ಗೋಯಲ್ ತಿಳಿಸಿದರು.
ಒಂದು ಸಲ ಹಿಂದೂ ಮುಖಂಡರು ಹಾಗೂ ಎರಡು ಸಲ ಮುಸ್ಲಿಂ ಮುಖಂಡರ ಸಭೆ ನಡೆಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡಾ ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಮಾಜಿ ಶಾಸಕ ವೀರಣ್ಣ ಚರಂತಿಮಠರ ಜತೆಗೆ ಒಂದು ಸುತ್ತು ಮಾತುಕತೆ ನಡೆಸಿದ್ದಾರೆ. ಮತ್ತು ಮುಸ್ಲಿಂ ಮುಖಂಡರನ್ನು ಕರೆದು ಮಾತುಕತೆ ಮಾಡಿದ್ದಾರೆ.
ಫೆ.28ರಿಂದ ಪಿಯುಸಿ ಪರೀಕ್ಷೆ ಹಾಗೂ ಮಾರ್ಚ್ 3ರಿಂದ ಹೋಳಿ ಹಬ್ಬ ಆರಂಭಗೊಳ್ಳಲಿದ್ದು, ಎಲ್ಲರೂ ಜಿಲ್ಲಾಡಳಿದೊಂದಿಗೆ ಸಹಕರಿಸಿ ಶಾಂತಿಯಿಂದ ವರ್ತಿಸಬೇಕು. ಯಾರಾದರೂ ಅಶಾಂತಿ ಉಂಟು ಮಾಡಲು ಪ್ರಯತ್ನಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದರು.
ನವನಗರದಲ್ಲಿ ಅಕ್ರಮ ಮಸೀದಿಗಳ ಬಗ್ಗೆ ಕೇಳಿದ ಪ್ರಶ್ನೆಗೆ, ಆರು ಮಸೀದಿಗಳು ಬಿಟಿಡಿಎಯಿಂದ ಅಲಾಟಮೆಂಟ್ ಆಗಿವೆ. ಹಿಂದೂಗಳಿದ್ದಲ್ಲಿ ದೇವಸ್ಥಾನ, ಮುಸ್ಲಿಂರು ಹೆಚ್ಚಿರುವಲ್ಲಿ ಮಸೀದಿ ನಿರ್ಮಿಸಲು ಅನುಮತಿ ನೀಡಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.



