ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಪೌರಾಯುಕ್ತೆಗೆ ಧಮ್ಕಿ ಹಾಕಿದ್ದ ಕಾಂಗ್ರೆಸ್ ಉಚ್ಚಾಟಿತ ನಾಯಕ ರಾಜೀವ್ ಗೌಡಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಪೌರಾಯುಕ್ತೆ ನಿರ್ಮಲಾ ಗೌಡ ಅವರಿಗೆ ನಿಂದಿಸಿದ ರಾಜೀವ್ ಗೌಡ ಅವರನ್ನು ಕೇರಳದಲ್ಲಿ ಬಂಧಿಸಿದ್ದ ಶಿಡ್ಲಘಟ್ಟ ಪೊಲೀಸರು ಮಂಗಳವಾರ ಶಿಡ್ಲಘಟ್ಟ ಜೆಎಂಎಫ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ರಾಜೀವ್ ಗೌಡ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ವಿಧಿಸಿತು.
ಬೆಂಬಲಿಗರಿಗೆ ಲಾಠಿ ರುಚಿ
ರಾಜೀವ್ ಗೌಡ ಜಾಮೀನು ರದ್ದಾದರೂ ಆತನ ಬೆಂಬಲಿಗರು ರಾಜೀವ್ ಗೌಡ ಪರ ಘೋಷಣೆ ಕೂಗಿ ಸಂಭ್ರಮ ಆಚರಿಸಿದ್ದರಿಂದ ಕೋರ್ಟ್ ಮುಂದೆ ಕೆಲಕಾಲ ಹೈಡ್ರಾಮ ಸೃಷ್ಟಿಯಾಗಿದ್ದು, ಪೊಲೀಸರು ಲಾಠಿಪ್ರಹಾರ ನಡೆಸಿ ಬೆಂಬಲಿಗರನ್ನು ಓಡಿಸಿದರು.
ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಾ ಗೌಡಗೆ ಬ್ಯಾನರ್ ವಿಚಾರವಾಗಿ ಫೋನ್ನಲ್ಲಿ ರಾಜೀವ್ ಗೌಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನು. ಅಷ್ಟೇ ಅಲ್ಲದೇ ಜೀವ ಬೆದರಿಕೆ ಹಾಕಿದ್ದನು. ಈ ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ರಾಜೀವ್ ಗೌಡ, ಸೋಮವಾರ ಅರೆಸ್ಟ್ ಆಗಿದ್ದನು. ಮಂಗಳವಾರ ಪೊಲೀಸರು ಕೋರ್ಟ್ಗೆ ಹಾಜರುಪಡಿಸಿದ್ದರು. ಈ ಸಂದರ್ಭದಲ್ಲಿ ಆರೋಪಿ ರಾಜೀವ್ ಗೌಡ, ಜಾಮೀನು ಅರ್ಜಿ ಕೂಡ ಸಲ್ಲಿಸಿದ್ದ.



