Wednesday, June 10, 2026
Google search engine
Homeರಾಜಕೀಯಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ, ಮಂತ್ರಿ ಸ್ಥಾನ ತ್ಯಜಿಸಲು ಸಿದ್ಧ: ಸಚಿವ ಕೆಎನ್ ರಾಜಣ್ಣ

ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ, ಮಂತ್ರಿ ಸ್ಥಾನ ತ್ಯಜಿಸಲು ಸಿದ್ಧ: ಸಚಿವ ಕೆಎನ್ ರಾಜಣ್ಣ

ಚುನಾವಣೆ ವೇಳೆ ಘೋಷಣೆ ಮಾಡಿದಂತೆ ಒಬ್ಬರಿಗೆ ಒಂದೇ ಹುದ್ದೆ ನಿಯಮ ಪಾಲನೆ ಆಗುತ್ತಿಲ್ಲ. ಈ ಬಗ್ಗೆ ಜನರಿಗೆ ಹಾಗೂ ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ಕೊಡಿ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ ಬಳಿ ಒತ್ತಡ ಹೇರಿದ್ದಾರೆ.

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರೆ ಮುಖಂಡರನ್ನು ಭೇಟಿ ಮಾಡಿದ ನಂತರ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಇನ್ನು ಮುಂದೆ ಒಬ್ಬರಿಗೆ ಒಂದೇ ಹುದ್ದೆ ಎಂದು ಘೋಷಣೆ ಮಾಡಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಕುರಿತು ಮೊದಲಿನಿಂದಲೂ ಬೇಡಿಕೆ ಇದೆ. ಆದರೆ ಲೋಕಸಭಾ ಚುನಾವಣೆ ನಂತರ ತೀರ್ಮಾನ ಮಾಡುವುದಾಗಿ ಹೈಕಮಾಂಡ್ ಹೇಳಿತ್ತು ಎಂದರು.

ಕೆಪಿಸಿಸಿ ಅಧ್ಯಕ್ಷರನ್ನು ಬದಲಾವಣೆ ಮಾಡಿ ಎಂದು ಹೈಕಮಾಂಡ್ ಬಳಿ ಹೇಳಿಲ್ಲ. ಬದಲಾಗಿ ಒಬ್ಬರಿಗೆ ಒಂದೇ ಹುದ್ದೆ ನಿಯಮ ಪಾಲಿಸಿ. ಇಲ್ಲದಿದ್ದರೆ ಈ ಬಗ್ಗೆ ಸ್ಪಷ್ಟ ಸಂದೇಶ ಕೊಡಿ. ಈ ಮೂಲಕ ಗೊಂದಲ ಬಗೆಹರಿಸಿ ಎಂದು ಹೈಕಮಾಂಡ್ ಬಳಿ ಮನವಿ ಮಾಡಿದ್ದೇನೆ ಎಂದು ಅವರು ಹೇಳಿದರು.

ನನ್ನನ್ನು ಹಾಸನ ಜವಾಬ್ದಾರಿಯಿಂದ ವಿಮುಕ್ತಿ ಮಾಡುವಂತೆ ಕೇಳಿದ್ದೇನೆ. ಒಂದು ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವುದಾದರೆ ಮಂತ್ರಿ ಸ್ಥಾನ ತ್ಯಾಗಕ್ಕೂ ಸಿದ್ಧ. ಪಕ್ಷ ಸಂಘಟನೆಗೆ ಒತ್ತು ನೀಡಬೇಕಾಗಿದೆ. ಹಾಸನ ಜವಾಬ್ದಾರಿಯಿಂದ ಮುಕ್ತಿ ನೀಡಿದರೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುವತ್ತ ಗಮನ ಹರಿಸುತ್ತೇನೆ. ಇದು ಅಗತ್ಯವೂ ಆಗಿದೆ ಎಂದು ರಾಜಣ್ಣ ಹೇಳಿದರು.

ಇದೇ ವೇಳೆ ರಾಜ್ಯದಲ್ಲಿ ಸಮಾವೇಶ ಮಾಡುವ ಪ್ರಸ್ತಾಪ ಇಟ್ಟಿದ್ದೇನೆ. ಚಿತ್ರದುರ್ಗ, ಹಾಸನ, ದಾವಣಗೆರೆ ಅಥವಾ ಹುಬ್ಬಳ್ಳಿಯಲ್ಲಿ ಯಾವುದಾದರೂ ಸಮಾವೇಶ ಮಾಡಬೇಕು. ಈ ಮೂಲಕ ಜನರಲ್ಲಿ ಗ್ಯಾರಂಟಿ ಯೋಜನೆಗಳ ಜಾಗೃತಿ ಮೂಡಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ಚುನಾವಣೆ ಎದುರಿಸುವುದು ಕಷ್ಟವಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿರುವುದಾಗಿ ಅವರು ಹೇಳಿದರು.

ಸಮಾವೇಶ ಮಾಡಲು ಕೆಪಿಸಿಸಿ ಅನುಮತಿ ಕೇಳುವ ಅಗತ್ಯವಿಲ್ಲ. ಎಐಸಿಸಿ ದೊಡ್ಡದೋ, ಕೆಪಿಸಿಸಿ ದೊಡ್ಡದೋ? ಎಂದು ಮಾಧ್ಯಮಗಳನ್ನು ಪ್ರಶ್ನಿಸಿದ ಅವರು, ನಾವು ಯಾವುದೇ ಸಮಾವೇಶ ಮಾಡಿದರೂ ಕೆಪಿಸಿಸಿ ಜೊತೆಯಲ್ಲೇ ಮಾಡುವುದು. ಆದರೆ ಎಐಸಿಸಿ ಅನುಮತಿ ನೀಡಬೇಕು ಎಂದು ಅವರು ಸ್ಪಷ್ಟಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments