ಬೆಂಗಳೂರು: ಲಿಂಗರಾಜಪುರಂನಲ್ಲಿ ಕಾಣಿಸಿಕೊಂಡಿದ್ದ ಕಲುಷಿತ ನೀರಿನ ಸಮಸ್ಯೆಯ ಮೂಲವನ್ನು ಪತ್ತೆಹಚ್ಚುವಲ್ಲಿ ಬೆಂಗಳೂರು ಜಲಮಂಡಳಿ (BWSSB) ಯಶಸ್ವಿಯಾಗಿದೆ.
ನೂತನವಾಗಿ ಅಳವಡಿಸಿಕೊಂಡಿರುವ ರೋಬೋಟಿಕ್ ತಂತ್ರಜ್ಞಾನದ (Robotic Technology) ಸಹಾಯದಿಂದ ಇಂದು ಬೆಳಿಗ್ಗೆ 10:30ರ ಸುಮಾರಿಗೆ ಕಲುಷಿತ ನೀರು ಸೇರ್ಪಡೆಯಾಗುತ್ತಿದ್ದ ನಿಖರವಾದ ಸ್ಥಳವನ್ನು ಪತ್ತೆಹಚ್ಚಲಾಗಿದೆ.
ರೋಬೋಟಿಕ್ ತಪಾಸಣೆಯ ವೇಳೆ, ಸುಮಾರು 40 ವರ್ಷ ಹಳೆಯದಾದ ಪೈಪ್‌ಲೈನ್ ವಯಸ್ಸಾದ ಕಾರಣ ತುಕ್ಕು ಹಿಡಿದಿರುವುದು (Corroded) ಕಂಡುಬಂದಿದೆ. ಇದರಿಂದಾಗಿ ನೀರು ಕಲುಷಿತಗೊಳ್ಳುತ್ತಿತ್ತು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಸಮಸ್ಯೆ ಪತ್ತೆಯಾದ ಕೂಡಲೇ ಎಚ್ಚೆತ್ತುಕೊಂಡಿರುವ ಮಂಡಳಿ, ಹಳೆಯ ಪೈಪ್‌ಲೈನ್ ಅನ್ನು ಬದಲಾಯಿಸಲು ತೀರ್ಮಾನಿಸಿದೆ.
ಅಧ್ಯಕ್ಷರ ಮೆಚ್ಚುಗೆ:
ಜಲಮಂಡಳಿ ಅಧ್ಯಕ್ಷರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್, ಇಂಜಿನಿಯರಿಂಗ್ ತಂಡದ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. “ನಮ್ಮ ತಂಡವು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಅತಿ ಕಡಿಮೆ ಸಮಯದಲ್ಲಿ ಸಮಸ್ಯೆಯನ್ನು ಪತ್ತೆಹಚ್ಚಿರುವುದು ಸಂತಸದ ವಿಷಯ. ಈ ತ್ವರಿತ ಕಾರ್ಯಾಚರಣೆಗಾಗಿ ಇಂಜಿನಿಯರಿಂಗ್ ತಂಡವನ್ನು ನಾನು ಅಭಿನಂದಿಸುತ್ತೇನೆ,” ಎಂದು ತಿಳಿಸಿದರು.
ಪೈಪ್ ಬದಲಾವಣೆ ಕಾರ್ಯ ಮುಗಿದ ತಕ್ಷಣ ಶುದ್ಧ ನೀರು ಸರಬರಾಜು ಪುನರಾರಂಭವಾಗಲಿದೆ ಎಂದು ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.



