ಕಳೆದೆರಡು ವರ್ಷಗಳಿಂದ ಗಾಯದಿಂದ ಕಣಕ್ಕೆ ಇಳಿಯದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹವಾಲ್ ಅಧಿಕೃತವಾಗಿ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್ ನಿಂದ ನಿವೃತ್ತಿ ಘೋಷಿಸಿದ್ದಾರೆ.
ಸೋಮವಾರ ಅಧಿಕೃತವಾಗಿ ಘೋಷಣೆ ಮಾಡಿದ 2012ರ ಒಲಿಂಪಿಕ್ಸ್ ಪದಕ ವಿಜೇತೆ ಸೈನಾ ನೆಹವಾಲ್, ಕ್ರೀಡೆ ನಿರೀಕ್ಷಿಸುವಷ್ಟು ದೈಹಿಕ ಸಾಮರ್ಥ್ಯ ಈಗ ಉಳಿದಿಲ್ಲ ಎಂದು ಹೇಳಿದ್ದಾರೆ.
2023ರಲ್ಲಿ ಕೊನೆಯ ಬಾರಿಗೆ ಸಿಂಗಾಪುರ ಟೂರ್ನಿಯಲ್ಲಿ ಕೊನೆಯ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್ ಪಂದ್ಯ ಆಡಿದ್ದ ಸೈನಾ ನೆಹವಾಲ್ ನಂತರ ಮಂಡಿ ನೋವಿನ ಕಾರಣ ಅಖಾಡಕ್ಕೆ ಇಳಿದಿರಲಿಲ್ಲ. ಅಲ್ಲದೇ ಈ ವೇಳೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರಿಂದ ಟೂರ್ನಿಗಳಿಂದ ಹಿಂದೆ ಸರಿದಿದ್ದರು. ಆದರೆ ಅಧಿಕೃತವಾಗಿ ಕ್ರೀಡೆಗೆ ವಿದಾಯ ಘೋಷಿಸಿರಲಿಲ್ಲ.
ನಾನು ಎರಡು ವರ್ಷಗಳಿಂದ ಯಾವುದೇ ಪಂದ್ಯ ಆಡಿಲ್ಲ. ಆದರೆ ನನಗೆ ಮರಳುವ ವಿಶ್ವಾಸವಿತ್ತು. ಅಲ್ಲದೇ ನನ್ನದೇ ಆದ ರೀತಿಯಲ್ಲಿ ಮರಳುವ ಉದ್ದೇಶ ಹೊಂದಿದ್ದೆ. ಆದರೆ ನನ್ನ ದೇಹ ಸ್ಪಂದಿಸದ ಕಾರಣ ಕ್ರೀಡೆಗೆ ಮರಳಲು ಆಗುತ್ತಿಲ್ಲ. ಮುಂದೆಯೂ ಇದು ಅಸಾಧ್ಯ ಎಂಬುದು ಅರಿವಾಗಿದ್ದು, ಆದ್ದರಿಂದ ನಿವೃತ್ತಿ ನಿರ್ಧಾರ ಕೈಗೊಂಡಿದ್ದೇನೆ ಎಂದು ಸೈನಾ ವಿವರಿಸಿದ್ದಾರೆ.



